ಹಾಸನ: ಜೀಪ್ ಪಲ್ಟಿಯಾಗಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ದನ್ ಸಾವಿಗೀಡಾದ ಘಟನೆ ಪ್ರಕರಣ ಸಂಬಂಧ ಹಾಸನ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೀಪ್ ಚಾಲಕ ಮಂಜೇಗೌಡ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಐಪಿಎಸ್ ಅಧಿಕಾರಿ ಹರ್ಷಬರ್ಧನ್ (26 ವರ್ಷ) ಮೂಲತಃ ಬಿಹಾರದವರು. ಓದಿದ್ದು ಸಿವಿಲ್ ಇಂಜಿನಿಯರಿಂಗ್. 2022ರಲ್ಲಿ ಮೊದಲ ಯತ್ನದಲ್ಲೇ ಯುಪಿಎಸ್ಸಿಯಲ್ಲಿ 153ನೇ ರ‍್ಯಾಂಕ್ ಪಡೆದು, ಐಪಿಎಸ್ಗೆ ಆಯ್ಕೆಯಾದರು. ತರಬೇತಿ ಹಂತದಲ್ಲಿದ್ದ ಹರ್ಷಬರ್ಧನ್ ಅವರು ಹೈದ್ರಾಬಾದ್ನಲ್ಲಿ ಟ್ರೈನಿಂಗ್ ಮುಗಿಸಿ, ಮೈಸೂರಿನ ಪೊಲೀಸ್ ತರಬೇತಿ ಕೇಂದ್ರದಲ್ಲಿ ನಾಲ್ಕು ವಾರಗಳ ತರಬೇತಿಗೆ ಆಗಮಿಸಿದ್ದರು.
ರವಿವಾರ ಹಾಸನದಲ್ಲಿ ಪ್ರಾಕ್ಟಿಕಲ್ ಟ್ರೈನಿಂಗ್ಗಾಗಿ ತೆರಳುತ್ತಿದ್ದರು. ಆದರೆ, ಹಾಸನ ಬಳಿಯ ರಾಷ್ಟ್ರೀಯ ಹೆದ್ದಾರಿ ಕಿತ್ತಾನೆಗಡಿ ಬಳಿ ಭೀಕರ ಅಪಘಾತ ಸಂಭವಿಸಿದೆ. ಜೀಪ್‌ನ ಟೈರ್ ಸ್ಫೋಟಗೊಂಡಿದೆ. ಪರಿಣಾಮ ಜೀಪ್ ಮೂರು ಸುತ್ತು ಉರುಳಿದೆ. ಪಲ್ಟಿಯಾದ ರಭಸಕ್ಕೆ ಜೀಪ್ ನಜ್ಜುಗುಜ್ಜಾಗಿದೆ. ಅದರಲ್ಲಿ ಪ್ರಯಾಣಿಸುತ್ತಿದ್ದ ಹರ್ಷಬರ್ಧನ್ ತಲೆಗೆ ಹಾಗೂ ದೇಹದ ಇನ್ನಿತರ ಭಾಗಕ್ಕೆ ತೀವ್ರವಾಗಿ ಪೆಟ್ಟುಬಿದ್ದು ತೀವ್ರ ರಕ್ತಸ್ರಾವ ಆಗಿದೆ. ಚಾಲಕ ಮಂಜೇಗೌಡ ಎಂಬುವರಿಗೂ ಗಾಯಗಳಾಗಿವೆ. ತಕ್ಷಣವೇ ಓಡಿಬಂದ ಗ್ರಾಮಸ್ಥರು ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಕೊನೆಯುಸಿರೆಳೆದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದಕ್ಷಿಣ ವಲಯ ಐಜಿಪಿ ಹಾಗೂ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ದೌಡಾಯಿಸಿದರು. ಪೊಲೀಸ್ ಜೀಪ್ ಚಾಲಕ ಮಂಜೇಗೌಡ ಕೂಡ ಗಾಯಗೊಂಡಿದ್ದು, ಆತನ ವಿರುದ್ಧ ಎಫ್ಐಆರ್ ದಾಖಲಾಗಿದೆ.