ತುಮಕೂರು: ಗಾರ್ಮೆಂಟ್ಸ್ ಬಸ್ ಡಿಕ್ಕಿ ಹೊಡೆದ ಪರಿಣಾಮ ತಾಯಿ-ಮಗಳು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಕಮಲಮ್ಮ (35), ವೀಣಾ (16), ಮೃತ ದುರ್ದೈವಿಗಳು. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ರಾಮಶೆಟ್ಟಿಹಳ್ಳಿ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಘಟನೆ ನಡೆದಿದೆ.
ಕಮಲಮ್ಮನವರು ಬೆಳಗ್ಗೆ 10ನೇ ತರಗತಿ ಓದುತ್ತಿದ್ದ ಮಗಳನ್ನು ಶಾಲೆಗೆ ಬಿಡಲು ತೆರಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಗಾರ್ಮೆಂಟ್ಸ್ ಬಸ್‌ವೊಂದು ಏಕಾಏಕಿ ತಾಯಿ- ಮಗಳಿಗೆ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಹೊಡೆದ ಪರಿಣಾಮ ಹಾರಿ ಬಿದ್ದ ತಾಯಿ -ಮಗಳು ಸ್ಥಳದಲ್ಲೇ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನೂ ಘಟನೆಯಲ್ಲಿ ಮತ್ತೋರ್ವ ಬೈಕ್ ಸವಾರನಿಗೂ ಗಂಭೀರ ಗಾಯವಾಗಿದೆ. ಮುದ್ದಪ್ಪ (50), ಗಾಯಾಳನ್ನು ತಿಪಟೂರು ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳ ಬೇಜವ್ದಾರಿತನಕ್ಕೆ ಈ ಸಾವು ಸಂಭವಿಸಿದೆ ಎಂದು ಕಿಡಿಕಾರಿದ ಗ್ರಾಮಸ್ಥರು ರಸ್ತೆ ತಡೆದು ಆಕ್ರೋಶ ಹೊರಹಾಕಿದರು.
ಮೃತದೇಹಗಳನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆಗೆ ಮುಂದಾದರು. ಹಲವು ಬಾರಿ ಅಂಡರ್ ಪಾಸ್ ನಿರ್ಮಿಸುವಂತೆ ಮನವಿ ಮಾಡಿದರು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಶವಗಳನ್ನು ಎತ್ತಲ್ಲ ಎಂದು ಪ್ರತಿಭಟನೆ ನಡೆಸಿದರು. ಇದೇ ವೇಳೆ ಪೊಲೀಸರು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು.