ಪೂಜೆ ಹೆಸರಲ್ಲಿ ಇಡೀ ಗ್ರಾಮಕ್ಕೆ ಕೋಟಿ ಕೋಟಿ ಪಂಗನಾಮ ಹಾಕಿದ ಖದೀಮರು

ವಿಜಯನಗರ: ಪೂಜೆ ಹೆಸರಲ್ಲಿ ಖದೀಮರ ತಂಡದಿಂದ ಇಡೀ ಗ್ರಾಮಕ್ಕೆ ಕೋಟಿ ಕೋಟಿ ಹಣ ಪಂಗನಾಮ ಹಾಕಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ತಾಂಡಾದಲ್ಲಿ ಬೆಳಕಿಗೆ ಬಂದಿದೆ.

ಒಂದಲ್ಲ ಎರಡಲ್ಲ ಹತ್ತು ಪಟ್ಟು ಅಂದರೆ 1 ಲಕ್ಷಕ್ಕೆ 10 ಲಕ್ಷ ಹಣ ಮಾಡಿ ಕೊಡುತ್ತೇವೆ ಎಂದು ಹೇಳಿ ಖದೀಮರ ತಂಡ ಕಲ್ಲಹಳ್ಳಿ ತಾಂಡಾದ ಜನರಿಗೆ ಆರು ತಿಂಗಳಲ್ಲಿ ಒಂದೇ ಗ್ರಾಮದ 60ಕ್ಕೂ ಹೆಚ್ಚು ಜನರಿಂದ 2 ಕೋಟಿಗೂ ಅಧಿಕ ಹಣ ಲೂಟಿ ಮಾಡಿದ್ದಾರೆ.

ನಿಮಗೆ ಕಷ್ಟ ಇದೆಯಾ, ಆರು ತಿಂಗಳಲ್ಲಿ ನಿಮ್ಮ ಕಷ್ಟ ಪರಿಹಾರ ಮಾಡುತ್ತೇವೆ ಎಂದು ಬಣ್ಣ ಬಣ್ಣದ ಆಸೆ ತೋರಿಸಿ ಮನೆಗೆ ರಾತ್ರಿ ವೇಳೆ ಬಂದು ಪೂಜೆ ಮಾಡಿ ಹಣ ಇಡಲಾಗುತ್ತಿತ್ತು. ಮಾತ್ರವಲ್ಲದೇ ಎಲ್ಲರ ಮೊಬೈಲ್ ಪೋನ್ ಪ್ಲೈಟ್ ಮೂಡಿಗೆ ಹಾಕಿಸಿ, ಲೈಟ್ ಆಫ್ ಮಾಡಿ ಪೂಜೆ ಮಾಡುತ್ತೇವೆ ಎಂದು ಹೇಳುತ್ತಿದ್ದರು. ಕೊನೆಗೆ ಬಾಕ್ಸ್ವೊಂದರಲ್ಲಿ ಲಕ್ಷಾಂತರ ಹಣ ಇಟ್ಟು ಪ್ಯಾಕ್ ಮಾಡಬಹುದಾ ಎಂದು ಕೇಳುತ್ತಿದ್ದರು. ಹಣ ಕೊಟ್ಟಿರುವವರು ಮಾಡಿ ಅಂದಾಗ ನೀವು ಹೊರಗೆ ಹೋಗಿ, ನಾವು ಪೂಜೆ ಮಾಡಿ ಮತ್ತೆ ಪ್ಯಾಕ್ ಮಾಡಬೇಕು ಎಂದು ಹೇಳಿ ಮನೆಯವರನ್ನು ಹೊರಗೆ ಕಳಿಸುತ್ತಿದ್ದ ಖದೀಮರು 168 ದಿನಗಳವರೆಗೆ ತೆಗೆಯಬಾರದು, ಆಮೇಲೆ ಇದರಲ್ಲಿನ ಹಣ 10 ಪಟ್ಟು ಹೆಚ್ಚಾಗುತ್ತದೆ ಎಂದು ನಂಬಿಸಿ ಜನರಿಗೆ ವಂಚನೆ ಮಾಡಿದ್ದರು.

ಖದೀಮರ ಗ್ಯಾಂಗ್‌ನಿಂದ ಮೋಸಹೋದ ಕಲ್ಲಹಳ್ಳಿ ತಾಂಡಾದ ಕುಮಾರ ನಾಯ್ಕ್ ಎಂಬಾತ ಹೊಸಪೇಟೆ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ರಾಜಸ್ಥಾನ ಮೂಲದ ಜಿತೇಂದ್ರ ಸಿಂಗ್, ಆತನಿಗೆ ಸಹಕರಿಸುತ್ತಿದ್ದ ಕಲ್ಲಹಳ್ಳಿ ಗ್ರಾಮದ ತುಕ್ಯಾ ನಾಯ್ಕ್, ಶಂಕು ನಾಯ್ಕ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 35 ಲಕ್ಷ ರೂ, ನೋಟು ಎಣಿಸುವ 1 ಯಂತ್ರ, ಟವೆಲ್, ಜಮ್ಕಾನ ಜಪ್ತಿ ಮಾಡಲಾಗಿದೆ.

ಪ್ರಕರಣದ ಪ್ರಮುಖ ಆರೋಪಿಗಳಾದ ಕಲ್ಲಹಳ್ಳಿ ಗ್ರಾಮದ ಸ್ವಾಮಿ ನಾಯ್ಕ್, ಕಾರುಬಾರಿ ವೆಂಕ್ಯಾ ನಾಯ್ಕ್ ಎಸ್ಕೇಪ್ ಆಗಿದ್ದು, ಪೊಲೀಸರು ಆರೋಪಿಗಳನ್ನು ಹುಡುಕುವ ಕಾರ್ಯದಲ್ಲಿ ತೊಡಗಿದ್ದಾರೆ.