ಕ್ಷುಲ್ಲಕ ಕಾರಣಕ್ಕೆ ಆಪ್ತ ಸ್ನೇಹಿತನ ಕೊಲೆ; ಆರೋಪಿಗೆ ಪೊಲೀಸ್​ ಗುಂಡೇಟು

ಹುಬ್ಬಳ್ಳಿ, ಅ.​ 12: ಕ್ಷುಲ್ಲಕ ಕಾರಣಕ್ಕೆ ಆಪ್ತ ಸ್ನೇಹಿತನನ್ನೇ ಕೊಲೆ ಮಾಡಿದ್ದ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ. ಶಿವರಾಜ ಕಮ್ಮಾರ ​(23) ಕೊಲೆಯಾದ ಯುವಕ. ಸುದೀಪ ರಾಯಾಪುರ, ಕಿರಣ್​ ಕೊಲೆ ಮಾಡಿದ ಆರೋಪಿಗಳು.

ಶಿವರಾಜ ಕಮ್ಮಾರ ಮತ್ತು ಸುದೀಪ ರಾಯಾಪುರ ಇಬ್ಬರೂ ಸ್ನೇಹಿತರಾಗಿದ್ದು, ಶುಕ್ರವಾರ ಇಬ್ಬರು ಒಟ್ಟಿಗೆ ಮನೆಯಲ್ಲಿ ಹಬ್ಬ ಮಾಡಿದ್ದರು. ಹಬ್ಬ ಆಚರಿಸಿದ ಬಳಿಕ ಶಿವರಾಜ ಕಮ್ಮಾರ ಹೊರಗಡೆ ಹೋಗಿದ್ದಾನೆ. “ಬೇಗ ಬರುತ್ತೇನೆ ಅಂತ ಅಮ್ಮ” ಅಂತ ಹೇಳಿ ಹೋಗಿದ್ದಾನೆ. ಆದರೆ ಶಿವರಾಜ ಕಮ್ಮಾರ ಜೀವಂತವಾಗಿ ಮನೆಗೆ ಬರಲಿಲ್ಲ.

ಶಿವರಾಜ ಕಮ್ಮಾರ​​ನ ತಲೆಗೆ ರಾಡ್​ನಿಂದ ಹೊಡೆದು, ಬಳಿಕ 30ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಚುಚ್ಚಿ ಗೋಪನಕೊಪ್ಪದ ಬಳಿ ಕೊಲೆ ಮಾಡಲಾಗಿದೆ. ಹೋಗಿ ಬರುತ್ತೇನೆ ಅಂತ ಹೇಳಿ ಹೋದ ಮಗ ಮರಳಿ ಜೀವಂತವಾಗಿ ಬಾರದೆ, ಶವವಾಗಿ ಬಂದಿದ್ದನ್ನು ಕಂಡು ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.

ಈ ಕೊಲೆ ಪ್ರಕರಣದಲ್ಲಿ ಭಾಗಿಯಾದ ಇನ್ನುಳಿದ ಆರೋಪಿಗಳು ಬೀಡು ಬಿಟ್ಟಿದ್ದ ಸ್ಥಳಕ್ಕೆ ಅಶೋಕನಗರ ಠಾಣೆಯ ಪೊಲೀಸರು ಸುದೀಪ್​ ಮತ್ತು ಕಿರಣ್​ನನ್ನು ಕರೆದೊಯ್ದಿದ್ದರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ಮಾಡಿ, ಪರಾರಿಯಾಗಲು ಯತ್ನಿಸಿದರು.

ಆಗ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಹಳೇ ಹುಬ್ಬಳ್ಳಿ ಠಾಣಾ ವ್ಯಾಪ್ತಿಯ ಹೊರವಲಯದಲ್ಲಿ ಘಟನೆ ನಡೆದಿದೆ. ಆರೋಪಿಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಶೋಕ ನಗರ ಪೊಲೀಸ್​ ಠಾಣಾ ವ್ಯಾಪ್ತಿಯ ಗೋಪನಕೊಪ್ಪ ವೃತ್ತದಲ್ಲಿ ಶುಕ್ರವಾರ ರಾತ್ರಿ ಕೊಲೆಯಾಗಿದೆ.