ಹುಬ್ಬಳ್ಳಿ, ಜುಲೈ 10: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಪುತ್ರಿ ನೇಹಾ ಹಿರೇಮಠ ಕೊಲೆ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಕೊಲೆ ಹಿಂದೆ ಲವ್ ಜಿಹಾದ್ ಇದೆ ಅಂತ ನೇಹಾ ತಂದೆ ನಿರಂಜನ ಹಿರೇಮಠ, ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ರಾಜ್ಯವ್ಯಾಪಿ ಪ್ರತಿಭಟನೆ ಮಾಡಿದ್ದವು. ಪ್ರಕರಣದ ತನಿಖೆ ನಡೆಸಿದ ಸಿಐಡಿ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಲವ್ ಜಿಹಾದ್ ಉಲ್ಲೇಖವಿಲ್ಲ. ಮದುವೆಗೆ ನಿರಾಕರಿಸಿದಕ್ಕೆ ನೇಹಾಳನ್ನು ಫಯಾಜ್ ಕೊಲೆ ಮಾಡಿದ್ದಾನೆ ಎಂದು ಸಿಐಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕೊಲೆಯಾದ 81 ದಿನಗಳ ಬಳಿಕ ಸಿಐಡಿ ಅಧಿಕಾರಿಗಳು 483 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ನಲ್ಲಿ ನೇಹಾಳ ತಂದೆ, ತಾಯಿ, ಸಹೋದರ, ಸಹಪಾಠಿಗಳು, ಗೆಳತಿಯರು, ಬಿವಿಬಿ ಕಾಲೇಜಿನ ಉಪನ್ಯಾಸಕರು ಸೇರಿದಂತೆ 99 ಸಾಕ್ಷ್ಯಗಳನ್ನು ಉಲ್ಲೇಖಿಸಿದ್ದಾರೆ.
ನೇಹಾ ಹಿರೇಮಠ ಮತ್ತು ಆರೋಪಿ ಫಯಾಜ್ ಹುಬ್ಬಳ್ಳಿಯ ಪಿಸಿ ಜಾಬಿನ್ ಕಾಲೇಜಿನಲ್ಲಿ ಬಿಸಿಎ ಅಧ್ಯಯನ ಮಾಡುತ್ತಿದ್ದಾಗ ಸಹಪಾಠಿಗಳಾಗಿದ್ದರು. ಇಬ್ಬರೂ ಆರಂಭದಲ್ಲಿ ಸ್ನೇಹಿತರಾಗಿದ್ದರು. ನಂತರ ಪ್ರೀತಿಸಲು ಆರಂಭಿಸಿದ್ದರು. 2024ರ ಮಾರ್ಚ್ ತಿಂಗಳಲ್ಲಿ ಇಬ್ಬರ ಮಧ್ಯೆ ಜಗಳವಾಗಿ, ಮನಸ್ತಾಪ ಉಂಟಾಯಿತು. ಬಳಿಕ ನೇಹಾ ಆರೋಪಿ ಫಯಾಜ್ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದಳು.
ಇದರಿಂದ ಫಯಾಜ್ ಹತಾಶಗೊಂಡು ನೇಹಾಳನ್ನು ಕೊಲೆ ಮಾಡಬೇಕೆಂದು ನಿರ್ಧಿರಿಸಿದ್ದನು. ಹೀಗಾಗಿ, ಏಪ್ರಿಲ್ 18 ರಂದು ಕೊಲೆ ಮಾಡುವ ಮೂರು ದಿನಗಳ ಮೊದಲು ಏಪ್ರಿಲ್ 15 ರಂದು ಧಾರವಾಡದ ಆರ್ಯ ಸೂಪರ್ ಬಜಾರ್ನಲ್ಲಿ ಚಾಕು ಖರೀದಿಸಿದ್ದಾನೆ. ಫಯಾಜ್ ಚಾಕು ಖರೀದಿಸಿದ ಸಿಸಿಟಿವಿ ದೃಶ್ಯ ಸಿಐಡಿ ಅಧಿಕಾರಿಗಳಿಗೆ ಲಭ್ಯವಾಗಿದೆ. ನಂತರ ಬಳಿಕ ನ್ಯೂ ಸಾಯಿ ಗಾರ್ಮೆಂಟ್ನಲ್ಲಿ ಟೋಪಿ ಕೆಂಪು ಟೋಪಿ ಖರೀದಿಸಿದ್ದಾನೆ.
ಬಳಿಕ ಏಪ್ರಿಲ್ 18 ರಂದು ಫಯಾಜ್ ಬಿವಿಬಿ ಕಾಲೇಜಿಗೆ ಬಂದು ನೇಹಾ ಎದುರು “ಇಷ್ಟು ದಿನ ಪ್ರೀತಿ ಮಾಡಿ ಈಗ ಮೋಸ ಮಾಡುತ್ತಿದ್ದೀಯಾ? ನನ್ನನ್ನು ಮದುವೆ ಆಗುವುದಿಲ್ಲವೇ? ಈ ನಿನ್ನನ್ನು ಬಿಡುವುದಿಲ್ಲವೆಂದು ಸಂಜೆ 4:40ರ ಸುಮಾರಿಗೆ ಚಾಕುವಿನಿಂದ ಮನಬಂದಂತೆ ಚುಚ್ಚಿ ಕೊಲೆ ಮಾಡಿ, ಚಾಕು ಅಲ್ಲೆ ಬಿಟ್ಟು ಓಡಿ ಹೋಗಿದ್ದಾನೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.
ಆರೋಪಿ ಫಯಾಜ್ ವಿರುದ್ಧ ಕಲಂ 302 (ಮರಣದಂಡನೆ ಇಲ್ಲವೇ ಜೀವಾವಧಿ ಶಿಕ್ಷೆ) 341 (ಒಂದು ತಿಂಗಳು ಜೈಲು ಶಿಕ್ಷೆ) ಹಾಗೂ 506 (ಜೀವ ಬೆದರಿಕೆಗಾಗಿ 7 ವರ್ಷಗಳ ಜೈಲು ಶಿಕ್ಷೆ) ಅಡಿಯಲ್ಲಿ ದೋಷಾರೋಪ ಹೊರಿಸಲಾಗಿದೆ.