ಹುಬ್ಬಳ್ಳಿ, ಜೂನ್ 23: ಆಟೋ ಚಾಲಕ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಪುತ್ರ ಆಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿಂತೆ ಎಂಟು ಮಂದಿಯನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ತಿಳಿಸಿದ್ದಾರೆ. ಶನಿವಾರ (ಜೂ.22) ರಾತ್ರಿ 30 ವರ್ಷದ ಆಕಾಶ್ ಮಠಪತಿಯನ್ನು ಲೋಹಿಯಾ ನಗರದ ಪವನ್ ಸ್ಕೂಲ್ ಹಿಂಭಾಗ ಕೊಲೆ ಮಾಡಲಾಗಿತ್ತು. ಪುತ್ರ ಆಕಾಶ್ ಕೊಲೆ ಅವನ ಸ್ನೇಹಿತರಿಂದಲೇ ಆಗಿದೆ ಎಂದು ತಂದೆ ಶೇಖರಯ್ಯ ಮಠಪತಿ ಅನುಮಾನ ವ್ಯಕ್ತಪಡಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಆಕಾಶ್ ಮಠಪತಿ ಪತ್ನಿ, ಅತ್ತೆ ಮತ್ತು ಮಾವ ಸೇರಿದಂತೆ 12 ಜನರ ವಿರುದ್ಧ ಶೇಖರಯ್ಯ ಮಠಪತಿ ಅವರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತ ಆಕಾಶ್ ಪತ್ನಿ ಕಾವ್ಯಾ, ಅತ್ತೆ ಶ್ರಿದೇವಿ, ಮಾವ ಮೋಹನ ನಾಯಕ್, ಭರತ್ ನಾಯಕ್, ಅರ್ಜುನ್ ಮಗಲಿ, ಸಂಜು ಕೊಪ್ಪದ್, ರಾಹುಲ್ ಕಾಂಬಳೆ, ವಿನಾಯಕ ತಾಳಿಕೋಟಿ, ಮನೋಜ್, ಚಮಕ್ ಮೌನೇಶ್, ಮಹೇಶ್ ಮತ್ತು ಕಾರ್ತಿಕ್ ರಜಪೂತ್ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 1860 ಯು/ಎಸ್ 149-302 ಅಡಿಯಲ್ಲಿ ದಾಖಲಾಗಿದೆ.
ಮೃತ ಆಕಾಶ್ ಪತ್ನಿ ಕಾವ್ಯಾ, ಅತ್ತೆ ಶ್ರೀದೇವಿ ಮತ್ತು ಮಾವ ಮೋಹನ ನಾಯಕ್ ಅವರ ಕುಮ್ಮಕ್ಕಿನಿಂದಲೇ ಕೊಲೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ 12 ಜನರಲ್ಲಿ ಪೊಲೀಸರು ಎಂಟು ಜನರನ್ನು ಬಂಧಿಸಿದ್ದಾರೆ. ಮೃತ ಆಕಾಶ್ನದ್ದು ಪ್ರೇಮ ವಿವಾಹ. ಆಕಾಶ್ ಮತ್ತು ಪತ್ನಿ ಕಾವ್ಯ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ವಾಸವಾಗಿದ್ದರು.
ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ-ನಿರಂಜನ ಹಿರೇಮಠ
ಆಕಾಶ್ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ವಿದ್ಯಾರ್ಥಿನಿ ನೇಹಾ ಹಿರೇಮಠ ತಂದೆ ನಿರಂಜನ್ ಹಿರೇಮಠ ಮಾತನಾಡಿ, ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ಗಾಂಜಾ, ಸಾರಾಯಿ ಮಾರಾಟವಾಗುತ್ತಿದೆ. ಕಾನೂನು ಸುವ್ಯವಸ್ಥೆ ಸರಿಪಡಿಸುವಂತೆ ಹೋರಾಟ ಮಾಡಿದ್ದೇವು. ಈ ಹಿಂದೆ ನನ್ನ ಪುತ್ರಿ ನೇಹಾ ಕೊಲೆಯಾದಾಗ ಹೋರಾಟ ಮಾಡಿದ್ವಿ. ಆದರೂ ಪೊಲೀಸರು ಇನ್ನೂ ಎಚ್ಚೆತ್ತಿಲ್ಲ. ನೇಹಾ ಆಯ್ತು, ಅಂಜಲಿ ಆಯ್ತು, ಇದೀಗ ಆಕಾಶ್ ಮಠಪತಿ ಕೊಲೆಯಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು. ಗೃಹ ಸಚಿವರು, ಸಿಎಂ ಭೇಟಿ ನೀಡಿದರೂ ಏನೂ ಬದಲಾವಣೆ ಆಗಿಲ್ಲ. ಕೊಲೆಯಾದ ಆಕಾಶ್ ಮರಣೋತ್ತರ ಪರೀಕ್ಷೆ ವರದಿ ಬರಬೇಕಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಹೋರಾಟ ಮಾಡುತ್ತೇವೆ. ಹುಬ್ಬಳ್ಳಿ ಬಂದ್ ಆದರೂ ಅಚ್ಚರಿ ಇಲ್ಲ ಎಂದರು.