ಹೊನ್ನಾವರ: ತಾಲೂಕಿನ ಹಳದೀಪುರದ ರಾಷ್ಟ್ರೀಯ ಹೆದ್ದಾರಿ 66 ರ ಚಿಪ್ಪಿಹಕ್ಕಲ್ ತಿರುವಿನಲ್ಲಿ ಅಕ್ಕಿ ಸಾಗಾಟದ ಲಾರಿಗೆ ಚಿರೆಕಲ್ಲು ಸಾಗಿಸುತ್ತಿದ್ದ ವಾಹನ ಡಿಕ್ಕಿಯಾಗಿ ಲಾರಿಯಲ್ಲಿದ್ದ ಒರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಸಂಭವಿಸಿದೆ.
ಆರೋಪಿತ ಚಿರೆಕಲ್ಲು ವಾಹನ ಚಾಲಕ ಕುಮಟಾ ಹೆಗಡೆಯ ಲಕ್ಷ್ಮಣ ಕೇಶವ ಮಡಿವಾಳ ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಹಿಂಬಂದಿಯಿಂದ ಅಕ್ಕಿಚೀಲ ತುಂಬಿದ ಲಾರಿಗೆ ಗುದ್ದಿದ್ದಾನೆ. ಎದುರಿನಿಂದ ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿ ಚಾಲಕ ರಸ್ತೆ ಬಲಬದಿಗೆ ತಿರುಗುವ ಸೂಚನೆ ನೀಡಿದ ಮೇಲು ಹಿಂಬದಿಯಿಂದ ಗುದ್ದಿದ್ದಾನೆ ಎನ್ನಲಾಗಿದೆ.
ಅಪಘಾತ ರಭಸಕ್ಕೆ ಅಕ್ಕಿ ತುಂಬಿದ ಲಾರಿ ಪಲ್ಟಿಯಾಗಿ,ಹೆದ್ದಾರಿಯಲ್ಲಿ ಅಕ್ಕಿಮೂಟೆ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಕಲ್ಲು ತುಂಬಿದ ವಾಹನದಲ್ಲಿದ್ದ ಕೂಲಿಕಾರ್ಮಿಕರು ವಾಹನದಲ್ಲೇ ಸಿಲುಕಿದ್ದು ಒರ್ವ ಮೃತಪಟ್ಟಿದ್ದಾನೆ.
ಮೃತಪಟ್ಟ ವ್ಯಕ್ತಿ ಕುಮಟಾ ತಾಲೂಕಿನ ಊರುಕೆರಿಯ ಬಲಿಯ ಹೊಸಬು ಗೌಡ (50) ಎಂದು ಗುರುತಿಸಲಾಗಿದೆ. ವಾಹನ ಚಾಲಕ ಲಕ್ಷ್ಮಣ ಕೇಶವ ಮಡಿವಾಳ, ಹಮಾಲಿಗಳಾದ ರಾಮಕೃಷ್ಣ ನಾರಾಯಣ ಮಡಿವಾಳ, ನಾಗೇಶ್ ಪಟಗಾರ ಗಂಭೀರ ಗಾಯಗೊಂಡಿದ್ದು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.
ಇನ್ನೊಂದು ಲಾರಿಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲಕಾಲ ಹೆದ್ದಾರಿಯಲ್ಲಿ ಟ್ರಾಪಿಕ್ ಸಮಸ್ಯೆ ಎದುರಾಗಿತ್ತು. ಕ್ರೆನ್ ಮೂಲಕ ಅಕ್ಕಿಚೀಲ ತುಂಬಿದ್ದ ಲಾರಿ ಎತ್ತಿ ಪೊಲೀಸರು ಸಂಚಾರ ಸುಗಮಗೊಳಿಸಿದರು.