ಗಣೇಶ ವಿಗ್ರಹ ತರಲು ತೆರಳುತ್ತಿದ್ದ ಟಾಟಾ ಏಸ್ ಪಲ್ಟಿ, ಇಬ್ಬರು ಸಾವು

ಚಿಕ್ಕಮಗಳೂರು, ಸೆಪ್ಟೆಂಬರ್​ 07: ಗಣೇಶ ಮೂರ್ತಿ ತರಲು ಹೋಗುತ್ತಿದ್ದ ವೇಳೆ ಟಾಟಾ ಏಸ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ನಡೆದಿದೆ. ಶ್ರೀಧರ್ (20) ಧನುಷ್ (20) ಮೃತ ಯುವಕರು. ಗಣಪತಿ ತರಲು 9 ಜನ ಯುವಕರು ಹೋಗುತ್ತಿದ್ದರು. ಭೈರಾಪುರ ಗೇಟ್ ಬಳಿ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಪಲ್ಟಿಯಾಗಿದೆ.

ಇಬ್ಬರು ಯುವಕರ ತಲೆಗೆ ಗಂಭೀರ ಗಾಯವಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಯುವಕರನ್ನು ತರೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಹಾಗೂ ಗಾಯಾಳುಗಳೆಲ್ಲರು ಲಿಂಗದಹಳ್ಳಿ ನಿವಾಸಿಗಳು ಎಂದು ತಿಳಿದು ಬಂದಿದೆ. ಲಿಂಗದಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.