ದೇಶದೆಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮ ಆಚರಣೆ

ವಿಘ್ನೇಶ್ವರಾಯ ವರದಾಯ ಸುರಪ್ರಿಯಯಾ
ಲಂಬೋದರಾಯ ಸಕಲಾಯ ಜಗದ್ವಿತಾಯ
ನಾಗಾನನ್ಯಾಯ ಶ್ರುತಿಯಗ್ನ ವಿಭೂಶಿತಾಯ
ಗೌರಿ-ಸುತಾಯ ಗಣನಾಥ ನಮೋ ನಮಸ್ತೆ

ಭಾರತದ ಜನಪ್ರಿಯ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ ಒಂದು. ಸಂಪತ್ತು ಮತ್ತು ಬುದ್ದಿವಂತಿಕೆಯ ದೇವರು ಗಣೇಶನನ್ನು ಸ್ತುತಿಸುವ ಹಬ್ಬ. ದೇಶದೆಲ್ಲೆಡೆ ಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತದೆ. ‘ಗಣಪತಪ.. ಐಸಾ.. ಅವನ ಹೊಟ್ಟೆ ನೋಡಿ.. ಅವನ ಸೊಂಡಿಲು ನೋಡಿ.. ಐಸಾ’ ಎಂದು ಗಣೇಶನ ರೂಪ ವರ್ಣಿಸುವುದು. ‘ಗಣೇಶ ಬಂದ.. ಕಾಯಿ ಕಡುಬು ತಿಂದ.. ಚಿಕ್ಕ ಕೆರೆಯಲ್ಲಿ ಬಿದ್ದ.. ದೊಡ್ಡ ಕೆರೆಯಲ್ಲಿ ಎದ್ದ’ ಎಂದು ಕೂಗುತ್ತಾ ಸಂಭ್ರಮದಿಂದ ಎಲ್ಲೆಲ್ಲೂ ಹಬ್ಬ ಆಚರಿಸುತ್ತಾರೆ.

ತಿಂಗಳಾನುಗಟ್ಟಲೆ ಗಣೇಶನನ್ನು ಕೂರಿಸಿ ಹಬ್ಬ ಆಚರಿಸುವುದು ವಾಡಿಕೆ. ದೇವಾಲಯ-ಚಪ್ಪರಗಳ ಅಲಂಕಾರ, ಸಂಗೀತ ಕಾರ್ಯಕ್ರಮ, ರುಚಿಕರವಾದ ಸಿಹಿತಿಂಡಿಗಳ ತಯಾರಿಯು ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ. ಗಣೇಶ ಚತುರ್ಥಿಯನ್ನು ಭಾರತದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಮನೆಯಲ್ಲಿ ಮತ್ತು ಸಾರ್ವಜನಿಕವಾಗಿ ಆಚರಿಸುವ ವಿಧಾನದಲ್ಲಿ ವ್ಯತ್ಯಾಸಗಳಿವೆ. ಮಹಾರಾಷ್ಟ್ರದಲ್ಲಿ ಪ್ರತಿಯೊಂದು ಕುಟುಂಬವೂ ತಮ್ಮ ಪ್ರಕಾರದ ಗಣೇಶ ಚತುರ್ಥಿಯನ್ನು ಆಚರಿಸುತ್ತವೆ. ಪ್ರತಿಯೊಂದು ರಾಜ್ಯದಲ್ಲೂ ಒಂದೊಂದು ರೀತಿಯಲ್ಲಿ ಹಬ್ಬ ಆಚರಣೆ ಇರುತ್ತದೆ. ಮಹಾರಾಷ್ಟ್ರವು ಗಣೇಶೋತ್ಸವಕ್ಕೆ ದೇಶದಲ್ಲೇ ಹೆಸರುವಾಸಿಯಾಗಿದೆ.