ಅಂಕೋಲಾದಲ್ಲಿ ಗಾಂಜಾ ಸೇವನೆ ಮಾಡಿ ಸಿಕ್ಕಿಬಿದ್ದ ಯುವಕ

ಅಂಕೋಲಾ: ಪಟ್ಟಣಕ್ಕೆ ಹೊಂದಿಕೊಂಡಿರುವ ಇಲ್ಲಿನ ಹುಲಿದೇವರವಾಡದ ಯುವಕನೋರ್ವ ಗಾಂಜಾ ಸೇವನೆ ಮಾಡಿ ಅಮಲೇರಿಸಿ ಗುಂಗಾಗುವಾಗ ಪೊಲೀಸರ ಕೈಗೆ ಸಿಕ್ಕಿ ದಂಗಾಗಿದ್ದಾನೆ. ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಟ್ಟಣದ ಹುಲಿದೇವರವಾಡದ ಐಮನ್ ಕಮರೂದ್ದಿನ್ ಶೇಕ್(26) ಗಾಂಜಾ ಸೇವನೆ ಮಾಡಿದ ಆರೋಪಿ. ದುಬೈನಲ್ಲಿ ವೃತ್ತಿ ನಿರ್ವಹಿಸುತ್ತಿದ್ದ. ಸೋಮವಾರ ಸಂಜೆ ಹುಲಿದೇವರವಾಡದ ಗಣಪತಿ ದೇವಸ್ಥಾನದ ಎದುರು ಸಾರ್ವಜನಿಕ ರಸ್ತೆಯಲ್ಲಿ ಅನುಮಾನದ ಆಧಾರದಲ್ಲಿ ಪೊಲೀಸರು ಗಾಂಜಾ ಸೇವನೆ ಮಾಡಿರುವ ಬಗ್ಗೆ ಐಮನ್ ನನ್ನು ಪ್ರಶ್ನಿಸಿದ್ದಾರೆ. ನಂತರ ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪರೀಕ್ಷೆ ಮಾಡಿಸಿದಾಗ ಮಾದಕ ವಸ್ತು ಸೇವನೆ ಖಚಿತವಾದ ಹಿನ್ನಲೆ ದೂರು ದಾಖಲಾಗಿದೆ.

ತಾಲ್ಲೂಕಿನಲ್ಲಿ ಗಾಂಜಾ ಸೇವನೆ ಮಾಡಿರುವ ಕುರಿತು ನಿರಂತರವಾಗಿ ಪ್ರಕರಣಗಳು ವರದಿಯಾಗುತ್ತಿವೆ. ಸೇವನೆ ಮಾಡಿರುವ ವ್ಯಕ್ತಿಯನ್ನು ವಶಕ್ಕೆ ಪಡೆದು ಯಾವ ರೀತಿಯ ಕ್ರಮ ಜರುಗುತ್ತದೆ ಎನ್ನುವದು ಸಾರ್ವಜನಿಕರಿಗೆ ತಿಳಿಯುತ್ತಿಲ್ಲ. ತಾಲ್ಲೂಕಿನಲ್ಲಿ ಗಾಂಜಾ ಎನ್ನುವುದು ಏಕಾಏಕಿ ಉದ್ಭವ ಆಗುತ್ತಿದೆಯೇ? ಗಾಂಜಾ ಸರಬರಾಜು ಮಾಡುವವರು ಯಾರು? ಅವರ ಪತ್ತೆಗೆ ಮುಂದಾಗುತ್ತಿಲ್ಲವೇ? ಯುವಕರ ಜೀವನಕ್ಕೆ ಮಾರಕವಾದರೂ ಇದರ ವಿರುದ್ಧ ಕಠಿಣ ಕ್ರಮ ಜರುಗುತ್ತಿಲ್ಲವೇಕೆ? ಪ್ರಭಾವಿಗಳು ಗಾಂಜಾ ಮೂಲಕ ಯುವಕರ ದೇಹ ಸುಟ್ಟು ಬೆಂಕಿಯಲ್ಲಿ ಹಣದ ಕಂತೆ ಕಾಯಿಸಿಕೊಳ್ಳುತ್ತಿದ್ದಾರೆಯೇ? ಎನ್ನುವ ಸಾರ್ವಜನಿಕರ ಮೌನ ಪ್ರಶ್ನೆಗಳಿಗೆ ಉತ್ತರ ನೀಡುವವರು ಯಾರು?