ಹುಬ್ಬಳ್ಳಿ, ಸೆ.05: ಬಹುದೊಡ್ಡ ಕಳ್ಳತನ ಪ್ರಕರಣವನ್ನ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸರು ಭೇದಿಸಿದ್ದಾರೆ. ಜುಲೈ 15 ರಂದು ಹುಬ್ಬಳ್ಳಿಯ ಕೇಶ್ವಾಪುರ ಠಾಣೆ ವ್ಯಾಪ್ತಿಯ ಶ್ರೀ ಭುವನೇಶ್ವರಿ ಜ್ಯುವೆಲರಿ ಅಂಗಡಿಯಲ್ಲಿ ಕಳ್ಳತನ ಆಗಿತ್ತು. ಇದರಿಂದ ಹುಬ್ಬಳ್ಳಿ ಮಂದಿ ಕಂಗಾಲಾಗಿದ್ದರು. ಇದೀಗ ಪೊಲೀಸರು ಕಳ್ಳತನ ಮಾಡಿ 45 ದಿನಗಳೊಳಗೆ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಖದೀಮರಿಂದ ಬರೋಬ್ಬರಿ 77 ಲಕ್ಷ ಮೌಲ್ಯದ 780 ಗ್ರಾಂ ಚಿನ್ನ, 24 ಕೆಜಿ ಬೆಳ್ಳಿ ಹಾಗೂ ಕೃತ್ಯಕ್ಕೆ ಬಳಸಿದ ಗ್ಯಾಸ್ ಕಟ್ಟರ್ನ್ನು ವಶಕ್ಕೆ ಪಡೆದಿದ್ದಾರೆ.
ಐವರು ಅರೆಸ್ಟ್, ಓರ್ವ ಪರಾರಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಫರಾನ್ ಶೇಖ್, ಮುಖೇಶ್, ಫಾತೀಮಾ ಶೇಖ್, ಅಫ್ತಾಬ್ ಅಹ್ಮದ್ ಶೇಖ್ ಹಾಗೂ ತಲತ್ ಶೇಖ್ ಎಂಬ ಐವರನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಇನ್ನು ಈ ಖತರ್ನಾಕ್ ಖದೀಮರ ಪತ್ತೆಗೆ ವಿವಿಧ ಇನ್ಸ್ಪೆಕ್ಟರ್, ಪಿಎಸ್ಐ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮೂರು ತಂಡಗಳನ್ನು ರಚನೆ ಮಾಡಿದ್ದರು. ಸತತ ಒಂದೂವರೆ ತಿಂಗಳ ಪರಿಶ್ರಮದಿಂದಾಗಿ ದೊಡ್ಡ ಪ್ರಕರಣ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದೇ ಕಳ್ಳತನ ಪ್ರಕರಣದಲ್ಲಿ ಪ್ರಮುಖ ಆರೋಪಿ ಫರಾನ್ ಶೇಕ್ಗೆ ಜುಲೈ 26 ರಂದು ಗೋಕುಲ ರೋಡ್ ಲೇಡಿ ಪಿಎಸ್‌ಐ ಕವಿತಾ ಎಂಬುವವರು ಗುಂಡಿನ ರುಚಿ ತೋರಿಸಿದ್ದರು. ಅಂತರಾಜ್ಯ ಕಳ್ಳ ಫರಾನ್ ಶೇಕ್ನನ್ನು ಬಂಧಿಸಿದ ಬಳಿಕ ಇನ್ನಿತರರನ್ನು ತೋರಿಸುವುದಾಗಿ ಹೇಳಿ ಪೊಲೀಸರನ್ನು ಕರೆದುಕೊಂಡು ಹುಬ್ಬಳ್ಳಿಯ ಗಾಮನ ಗಟ್ಟಿ ಪ್ರದೇಶದ ಬಳಿ ಹೋಗಿದ್ದ. ಈ ವೇಳೆ ಪೊಲೀಸರನ್ನು ನೂಕಿ ತಪ್ಪಿಸಿಕೊಳ್ಳಲು ಯುತ್ನಸಿದ್ದ. ಮೊದಲು ಎರಡು ಸುತ್ತು ಗಾಳಿಯಲ್ಲಿ ಗುಂಡು ಹೊಡೆದ ಪಿಎಸ್ಐ, ಫರಾನ್ ಹೆದರದೆ ಇದ್ದಾಗ, ಇನ್ಸ್ಪೆಕ್ಟರ್ ಕವಿತಾ ಮಾಡ್ಯಾಳ ಅವರು ಫರಾನ್ ಮೇಲೆ ಫೈರಿಂಗ್ ಮಾಡಿದ್ದರು.