ಪ್ರೋ ಕಬಡ್ಡಿ ಪಂದ್ಯಾವಳಿಗೆ ಕನ್ನಡದ ಬ್ರ್ಯಾಂಡ್‌ ‘ನಂದಿನಿ’ ಪ್ರಾಯೋಜಕತ್ವ

ಬೆಂಗಳೂರು: ಪ್ರೋ ಕಬಡ್ಡಿ ಪಂದ್ಯಾವಳಿಗೆ ಕರ್ನಾಟಕ ಹಾಲು ಮಹಾಮಂಡಳದ ನಂದಿನಿ ಬ್ರ್ಯಾಂಡ್‌ ಸೆಂಟ್ರಲ್‌ ಪ್ರಾಯೋಜಕತ್ವ ವಹಿಸಲು ಮುಂದಾಗಿದೆ.

ಪ್ರೋ ಕಬಡ್ಡಿ ಜೊತೆಗೆ ಇಂಡಿಯನ್‌ ಸೂಪರ್‌ ಲೀಗ್‌ ಫುಟ್ಬಾಲ್‌ ಪಂದ್ಯಾವಳಿಯ ಪ್ರಯೋಜಕತ್ವವನ್ನೂ ಕೆಎಂಎಫ್‌ ಪಡೆಯುತ್ತಿದೆ. ಈ ಎರಡು ಪಂದ್ಯಾವಳಿಗಳು ದೇಶದ ವಿವಿಧ ಸ್ಥಳಗಳಲ್ಲಿ ನಡೆಯುವುದರಿಂದ ಬ್ರ್ಯಾಂಡ್ ಪ್ರಮೋಷನ್ ಆಗಲಿದೆ. ಈ ಪಂದ್ಯಾವಳಿಗಳಲ್ಲಿ ಎಲ್‌ಇಡಿ ಬೋರ್ಡ್, ಟೈಟಲ್, ಪೋಸ್ಟರ್‌ಗಳಲ್ಲಿ ನಂದಿನಿ ರಾರಾಜಿಸಲಿದೆ ಎಂದು ಕೆಎಂಎಫ್ ಎಂಡಿ ಜಗದೀಶ್ ತಿಳಿಸಿದ್ದಾರೆ.

ಇಂಡಿಯನ್ ಸೂಪರ್ ಲೀಗ್ ಪುಟ್ಬಾಲ್‌ನ 11ನೇ ಸೀಸನ್ ಸೆ.13 ರಿಂದ ಆರಂಭವಾಗಲಿದೆ. ಪಂದ್ಯದಲ್ಲಿ 13 ತಂಡಗಳು ಸ್ಪರ್ಧಿಸಲಿವೆ. ಈ ಪಂದ್ಯಾವಳಿ ಕೋಲ್ಕತ್ತಾ, ದೆಹಲಿ, ಕೇರಳ ಸೇರಿದಂತೆ ಹಲವೆಡೆ ನಡೆಯಲಿದೆ. ಜೊತೆಗೆ ಪ್ರೋ ಕಬಡ್ಡಿ ಪಂದ್ಯಾವಳಿಯ ಸೆಂಟ್ರಲ್ ಸ್ಪಾನ್ಪರ್‌ಶಿಪ್ ಸಹ ಪಡೆಯಲು ಕೆಎಂಎಫ್ ಮುಂದಾಗಿದೆ. ಈ ಎರಡು ಪಂದ್ಯಾವಳಿಗಳ ಸೆಂಟ್ರಲ್ ಟೈಟಲ್, ಎಲ್‌ಇಡಿ ಬೋರ್ಡ್‌ಗಳು, ಪ್ರೆಸೆಂಟೇಶನ್ ಬ್ಯಾಕ್‌ಡ್ರಾಪ್‌ಗಳು ಸೇರಿ ವಿವಿಧ ರೀತಿಯಲ್ಲಿ ಪ್ರಾಯೋಜಕತ್ವದ ಗುರಿಯನ್ನು ಕೆಎಂಎಫ್ ಹೊಂದಿದೆ. ಜೊತೆಗೆ ನಂದಿನಿ ಮೊಸರು, ಬೆಣ್ಣೆ ಮತ್ತು ತುಪ್ಪ ಸೇರಿದಂತೆ ಡೈರಿ ಉತ್ಪನ್ನಗಳನ್ನು ದೆಹಲಿ ಮಾರುಕಟ್ಟೆಯಲ್ಲಿ ಮುಂದಿನ ತಿಂಗಳಿನಿಂದ ಪರಿಚಯಿಸಲು ಸಿದ್ಧವಾಗಿದೆ ಎನ್ನಲಾಗಿದೆ.

ಇತ್ತೀಚೆಗೆ ನಡೆದ T20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ಕೆಎಂಎಫ್‌ ಪ್ರಾಯೋಜಕತ್ವ ನೀಡಿತ್ತು. ಈ ಮೂಲಕ ನಂದಿನಿ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಗಳಿಗೆ ಪ್ರಯೋಜಕತ್ವವನ್ನು ನೀಡುವ ಭಾರತೀಯ ಡೈರಿ ಬ್ರ್ಯಾಂಡ್ ಎಂಬ ಹೆಗ್ಗಳಿಕೆಗೆ ಗುರಿಯಾಗಿತ್ತು. ಜೊತೆಗೆ 100 ಗ್ಲೋಬಲ್ ಬ್ರ್ಯಾಂಡ್‌ಗಳಲ್ಲಿ ನಂದಿನಿ ಸಹ ಹೆಸರು ಪಡೆದಿತ್ತು.