ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದರಿಂದ ಸ್ವಾತಂತ್ರ್ಯ ಬಂತು, ನೀವು ದೇಶಕ್ಕಾಗಿ ಬದುಕಿ, ಸಮೃದ್ಧಿ ಬರುತ್ತದೆ: ಮೋದಿ

ಅಂದು ಜನರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದರಿಂದ ಸ್ವಾತಂತ್ರ್ಯ ನಮ್ಮದಾಯಿತು, ಇಂದು ನೀವು ದೇಶಕ್ಕಾಗಿ ಬದುಕಿ, ದೇಶವು ಸಮೃದ್ಧಿಗೊಳ್ಳುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 78ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ನಮ್ಮ ಪೂರ್ವಜರ ರಕ್ತ ನಮ್ಮಲ್ಲಿ ಹರಿಯುತ್ತಿದೆ ಅದು ಖುಷಿಯ ವಿಚಾರ.

ಅಂದು ಕೇವಲ 40 ಕೋಟಿ ಜನರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು, ಇಂದು ನಾವು 140 ಕೋಟಿ ಜನರಿದ್ದೇವೆ ನಾವೆಲ್ಲರೂ  ಒಂದೇ ಅಂಕಲ್ಪ, ನಾವೆಲ್ಲರೂ ಒಂದೇ ಎಂಬ ಮನೋಭಾವದಿಂದ ಮುನ್ನಡೆದರೆ ಖಂಡಿತವಾಗಿ ನಮ್ಮ ಮುಂದೆ ಬರುವ ಯಾವುದೇ ಸವಾಲನ್ನು ಎದುರಿಸುವ ಶಕ್ತಿ ನಮಗೆ ಬರುತ್ತದೆ ಎಂದು ಮೋದಿ ಹೇಳಿದರು.

ಇಂದು ತಮ್ಮ ಜೀವನದುದ್ದಕ್ಕೂ ಹೋರಾಡಿದ ಭಾರತಮಾತೆಯ ಅಸಂಖ್ಯಾತ ಭಕ್ತರಿಗೆ ಗೌರವ ಸಲ್ಲಿಸುವ ಹಬ್ಬವಾಗಿದೆ. ನಮ್ಮ ರೈತರು, ಸೈನಿಕರು ಮತ್ತು ಯುವಕರ ಸ್ವಾತಂತ್ರ್ಯದ ಬಗೆಗಿನ ಧೈರ್ಯ ಮತ್ತು ಭಕ್ತಿ ಜಗತ್ತಿಗೆ ಸ್ಪೂರ್ತಿದಾಯಕ ಘಟನೆಯಾಗಿದೆ. ಸ್ವಾತಂತ್ರ್ಯದ ಮೊದಲು, 40 ಕೋಟಿ ದೇಶವಾಸಿಗಳು ಉತ್ಸಾಹವನ್ನು ತೋರಿಸಿದರು ಮತ್ತು ಸಂಕಲ್ಪದೊಂದಿಗೆ ಮುನ್ನುಗ್ಗಿದ್ದರು ಎಂದು ಹೇಳಿದ್ದಾರೆ.

ಸರ್ಕಾರ ಜನರ ಬಳಿಗೆ ಬರುತ್ತಿದೆ ಹಿಂದೆ ಜನರು ಸರ್ಕಾರದೊಂದಿಗೆ ಕೈಜೋಡಿಸಿ ಮೂಲ ಸೌಕರ್ಯಗಳಿಗೆ ಬೇಡಿಕೆ ಇಡುತ್ತಿದ್ದರು, ಇಂದು ಸರ್ಕಾರವೇ ಜನರ ಬಳಿಗೆ ಹೋಗುತ್ತಿದೆ. ಇಂತಹ ಸುಧಾರಣೆಗಳು ಮುಂದುವರಿಯಲಿವೆ. 10 ವರ್ಷಗಳಲ್ಲಿ ದೇಶದ ಯುವಕರ ಕನಸುಗಳಿಗೆ ರೆಕ್ಕೆಪುಕ್ಕ ಬಂದಿದೆ ಎಂದರು.

ಸುಧಾರಣೆಗಳಿಗೆ ಪ್ರಧಾನಿ ಮೋದಿ ಒತ್ತು 

ನಮ್ಮ ಸುಧಾರಣೆಗಳ ಬದ್ಧತೆ ನಾಲ್ಕು ದಿನಗಳ ಚಪ್ಪಾಳೆಗಾಗಿ ಅಲ್ಲ, ನಮ್ಮ ಸುಧಾರಣೆಗಳ ಪ್ರಕ್ರಿಯೆಯು ಯಾವುದೇ ಬಲವಂತದ ಅಡಿಯಲ್ಲಿಲ್ಲ. ನಾವು ರಾಜಕೀಯ ಬಲವಂತದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ರಾಜಕೀಯ ಲೆಕ್ಕಾಚಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ನಮಗೆ ಒಂದೇ ಒಂದು ನಿರ್ಣಯವಿದೆ – ಮೊದಲು ರಾಷ್ಟ್ರೀಯ ಹಿತಾಸಕ್ತಿ ಎಂದು ಹೇಳಿದರು.

ಭಾರತವು ವಿಶ್ವದ ಕೌಶಲ್ಯ ರಾಜಧಾನಿಯಾಗಬೇಕು, ಭಾರತವು ಜಾಗತಿಕ ಉತ್ಪಾದನಾ ಕೇಂದ್ರವಾಗಬೇಕು, ಭಾರತೀಯ ವಿಶ್ವವಿದ್ಯಾಲಯಗಳು ಜಾಗತಿಕವಾಗಬೇಕು, ಭಾರತೀಯ ಮಾಧ್ಯಮಗಳು ಜಾಗತಿಕವಾಗಬೇಕು, ಭಾರತ ಆದಷ್ಟು ಬೇಗ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಸ್ವಾವಲಂಬಿಯಾಗಬೇಕು, ಪ್ರಪಂಚದ ಪ್ರತಿಯೊಂದು ಡೈನಿಂಗ್ ಟೇಬಲ್‌ಗೆ ಸೂಪರ್‌ಫುಡ್ ತಲುಪಿಸಬೇಕು, ಭಾರತದ ಸಣ್ಣ ರೈತರನ್ನು ಜಗತ್ತನ್ನು ಪೋಷಿಸುವ ಮೂಲಕ ಸಮೃದ್ಧಗೊಳಿಸಬೇಕು ಎಂದರು.

ಬಾಹ್ಯಾಕಾಶದಲ್ಲಿ ಭಾರತದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಬೇಕು, ಭಾರತದ ಸಾಂಪ್ರದಾಯಿಕ ಔಷಧಗಳು ಮತ್ತು ಸ್ವಾಸ್ಥ್ಯವನ್ನು ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು. ಭಾರತವು ಶೀಘ್ರವಾಗಿ ಸಾಧ್ಯವಾದರೆ ಮೂರನೇ ಅತಿದೊಡ್ಡ ಆರ್ಥಿಕತೆಯಾಗಬೇಕು.