ಎಸ್‌ಸಿ, ಎಸ್‌ಟಿ ಸಮುದಾಯದ ಅಭಿವೃದ್ಧಿಗೆ ರಾಜ್ಯ ಬದ್ಧ; ಸಿದ್ದರಾಮಯ್ಯ

ಬೆಂಗಳೂರು: ಬೆಂಗಳೂರಿನ ಮಾಣೆಕ್‌ ಷಾ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಿದರು. ಈ ಬಾರಿ ಅವರು ಬುಲೆಟ್ ಪ್ರೂಫ್ ಕವಚ ಇಲ್ಲದೆ ಭಾಷಣ ಮಾಡಿದ್ದು ವಿಶೇಷ. ಈ ವೇಳೆ ಅವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಅಭ್ಯುದಯಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದ ವಿವಿಧ ಯೋಜನೆಗಳನ್ನು ವಿವರಿಸಿದರು.

ʼʼಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಅಭ್ಯುದಯಕ್ಕಾಗಿ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಜಾರಿಗೊಳಿಸಲಾಗಿದ್ದ ಎಸ್.ಸಿ.ಎಸ್.ಪಿ. / ಟಿ.ಎಸ್.ಪಿ. ಕಾಯ್ದೆ 2013ರ ಸೆಕ್ಷನ್ 7(ಡಿ) ಅನ್ನು ಕೈ ಬಿಡುವ ಮೂಲಕ ಅನುದಾನ ಪರಿಶಿಷ್ಟ ಸಮುದಾಯಗಳಿಗಾಗಿಯೇ ಬಳಕೆಯಾಗುವುದನ್ನು ಖಾತರಿಪಡಿಸುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಹಾಗೂ ಹಿಂದುಳಿದ ವರ್ಗದವರಿಗೆ 1 ಕೋಟಿ ರೂ.ವರೆಗಿನ ಗುತ್ತಿಗೆಯಲ್ಲಿ ಮೀಸಲಾತಿ, ಸರ್ಕಾರಿ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ನೇಮಕಾತಿಯಲ್ಲಿ ಮೀಸಲಾತಿ, ಮಹಿಳಾ ಉದ್ಯಮಿಗಳಿಗೆ ಕೆ.ಎಸ್.ಎಫ್.ಸಿ.ಯಲ್ಲಿ ಶೇ. 4ರ ಬಡ್ಡಿ ದರದಲ್ಲಿ ನೀಡುವ ಸಾಲದ ಮಿತಿ 5 ಕೋಟಿ ರೂ.ಗಳಿಗೆ ಹೆಚ್ಚಳ ಮುಂತಾದ ಉಪಕ್ರಮಗಳು ದುರ್ಬಲ ವರ್ಗಗಳ ಕುರಿತ ನಮ್ಮ ಕಾಳಜಿಗೆ ಸಾಕ್ಷಿಯಾಗಿವೆʼʼ ಎಂದು ಸಿದ್ದರಾಮಯ್ಯ ಹೇಳಿದರು.

ವಿವಿಧ ಜನ ಕಲ್ಯಾಣ ಯೋಜನೆಗಳು

ʼʼನಮ್ಮ ಸರಕಾರದ ಜನಕಲ್ಯಾಣ ಯೋಜನೆಗಳು ಐದು ಗ್ಯಾರಂಟಿಗಳಿಗಷ್ಟೇ ಸೀಮಿತವಾಗಿಲ್ಲ. ದುರ್ಬಲ ವರ್ಗದವರಿಗೆ ಸಾಮಾಜಿಕ ಭದ್ರತೆ ಒದಗಿಸುವ ವಿವಿಧ ಮಾಸಿಕ ಪಿಂಚಣಿಗಳಡಿ 78.64 ಲಕ್ಷ ಫಲಾನುಭವಿಗಳು ನೇರ ನಗದು ವರ್ಗಾವಣೆಯ ರೂಪದಲ್ಲಿ ನೆರವು ಪಡೆಯುತ್ತಿದ್ದಾರೆ. ಮೈತ್ರಿ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡಲಾಗುವ ಪಿಂಚಣಿ ಮೊತ್ತವನ್ನು 800 ರೂ.ಗಳಿಂದ 1,200 ರೂ.ಗಳಿಗೆ ಹಾಗೂ ಮಾಜಿ ದೇವದಾಸಿಯರಿಗೆ ನೀಡಲಾಗುತ್ತಿರುವ ಮಾಸಾಶನವನ್ನು 1,500 ರೂ.ಗಳಿಂದ 2,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಇದಕ್ಕಾಗಿ ನಮ್ಮ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವೃದ್ಧಾಪ್ಯ ವೇತನ, ವಿಧವಾ ವೇತನ, ಮೈತ್ರಿ, ಮನಸ್ವಿನಿ ಮೊದಲಾದ ಸಾಮಾಜಿಕ ಭದ್ರತೆ ಯೋಜನೆಗಳಡಿ 13,027 ಕೋಟಿ ರೂ. ವೆಚ್ಚ ಮಾಡಲಾಗಿದೆʼʼ ಎಂದು ಸಿಎಂ ತಿಳಿಸಿದರು.

ʼʼಇದರ ಜತೆಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಾಲು ಉತ್ಪಾದಕರ ಖಾತೆಗಳಿಗೆ 1,822.28 ಕೋಟಿ ರೂ.ಗಳ ಪ್ರೋತ್ಸಾಹಧನವನ್ನು ಡಿ.ಬಿ.ಟಿ. ಮೂಲಕ ವರ್ಗಾವಣೆ ಮಾಡಲಾಗಿದೆ. ಸಹಕಾರ ಸಂಸ್ಥೆಗಳಿಂದ ನೀಡಲಾದ ಬೆಳೆಸಾಲ, ಸ್ವ-ಸಹಾಯ ಸಂಘಗಳ ಸಾಲ ಹಾಗೂ ಮತ್ತಿತರ ಸಾಲಗಳಿಗೆ 1,642 ಕೋಟಿ ರೂ. ಬಡ್ಡಿ ಸಹಾಯಧನ ನೀಡಲಾಗಿದೆ ಹಾಗೂ 20,029 ಕೋಟಿ ರೂ. ವೆಚ್ಚ ಭರಿಸಿ ನೀರಾವರಿ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಒದಗಿಸಲಾಗಿದೆʼʼ ಎಂದರು.

ಕೊಬ್ಬರಿಗೆ ಸಹಾಯಧನ

ʼʼಕೊಬ್ಬರಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರವು ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಹೆಚ್ಚುವರಿಯಾಗಿ 1,500 ರೂ. ಪ್ರೋತ್ಸಾಹಧನ ಘೋಷಿಸಿದ್ದಲ್ಲದೆ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರದ ನಾಫೆಡ್‍ನಿಂದ ಬರಬೇಕಾದ ಪೂರ್ಣ ಅನುದಾನ ಬಿಡುಗಡೆಯನ್ನು ನಿರೀಕ್ಷಿಸಿ ರಾಜ್ಯ ಸರ್ಕಾರ ಘೋಷಿಸಿದ ನೆರವೂ ಸೇರಿದಂತೆ ಒಟ್ಟು 870 ಕೋಟಿ ರೂ. ಗಳನ್ನು ನೇರವಾಗಿ 58,893 ರೈತರ ಖಾತೆಗಳಿಗೆ ವರ್ಗಾಯಿಸಿದೆʼʼ ಎಂದು ಸಿಎಂ ಮಾಹಿತಿ ನೀಡಿದರು.

ಅಸಂಘಟಿತ ಕಾರ್ಮಿಕರಿಗೆ ನೆರವು

ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಮೋಟಾರು ಮತ್ತು ಇತರ ಸಂಬಂಧಿತ ಕಾರ್ಮಿಕರಿಗೆ ಹಾಗೂ ಸಿನೆಮಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿದ ಕಾರ್ಮಿಕರ ಕಲ್ಯಾಣಕ್ಕೆ ಪ್ರತ್ಯೇಕ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ. ಇದರೊಂದಿಗೆ ಕಾರ್ಮಿಕರಿಗೆ ವಿಮಾ ಸೌಲಭ್ಯ ಯೋಜನೆ ಮತ್ತು ಪತ್ರಿಕಾ ವಿತರಕರಿಗೆ ಅಪಘಾತ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಗಳನ್ನು ಜಾರಿಗೊಳಿಸಲಾಗಿದೆʼʼ ಎಂದು ಸಿದ್ದರಾಮಯ್ಯ ತಿಳಿಸಿದರು.