ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ಮಸೂದೆಯ ವಿವರ ಇಲ್ಲಿದೆ ನೋಡಿ

ಬೆಂಗಳೂರು, ಜುಲೈ 17: ಖಾಸಗಿ ಕ್ಷೇತ್ರದ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆಗೆ ಕರ್ನಾಟಕ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ. ಮಸೂದೆಯು ಗುರುವಾರ ವಿಧಾನಸಭೆಯಲ್ಲಿ ಮಂಡನೆಯಾಗಲಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾಹಿತಿ ನೀಡಿದ್ದಾರೆ. ‘ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಉದ್ಯಮ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ಕರ್ನಾಟಕ ರಾಜ್ಯ ಉದ್ಯೋಗ ಮಸೂದೆ 2024’ ಗುರುವಾರ ವಿಧಾನಸಭೆಯಲ್ಲಿ ಮಂಡನೆಯಾಗಲಿದೆ.

ಮಸೂದೆಯಲ್ಲೇನಿದೆ?

ಯಾವುದೇ ಖಾಸಗಿ ಉದ್ಯಮ, ಕಾರ್ಖಾನೆ ಅಥವಾ ಇತರ ಸಂಸ್ಥೆಗಳು ನಿರ್ವಹಣಾ ವಿಭಾಗಗಳಲ್ಲಿ (ಮ್ಯಾನೇಜ್​ಮೆಂಟ್) ಸ್ಥಳೀಯ ಅಭ್ಯರ್ಥಿಗಳಿಗೆ ಶೇ 50 ರಷ್ಟು ಮೀಸಲಾತಿ ನೀಡಬೇಕು. ನಿರ್ವಹಣೆಯೇತರ (ನಾನ್ ಮ್ಯಾನೇಜ್​ಮೆಂಟ್) ವಿಭಾಗಗಳಲ್ಲಿ ಶೇ 75ರಷ್ಟು ಮೀಸಲಾತಿ ನೀಡಬೇಕು.

ಮೀಸಲಾತಿಗೆ ಯಾರೆಲ್ಲ ಅರ್ಹರು, ಮಾನದಂಡವೇನು?

ಕರ್ನಾಟಕದಲ್ಲಿ ಹುಟ್ಟಿದವರು, ಕರ್ನಾಟಕದಲ್ಲಿ 15 ವರ್ಷಗಳಿಂದ ವಾಸಿಸುತ್ತಿರುವವರು, ಕನ್ನಡ ಭಾಷೆಯಲ್ಲಿ ಮಾತಾಡಲು, ಓದಲು ಹಾಗೂ ಬರೆಯಲು ಬರುವವರು ಮೀಸಲಾತಿಗೆ ಅರ್ಹರು. ಅಭ್ಯರ್ಥಿಗಳು ಕನ್ನಡವನ್ನು ಒಂದು ಭಾಷೆಯಾಗಿ ಹೊಂದಿರುವ ಮಾಧ್ಯಮಿಕ ಶಾಲಾ ಪ್ರಮಾಣಪತ್ರವನ್ನು ಹೊಂದಿಲ್ಲದಿದ್ದರೆ, ಅವರು ‘ನೋಡಲ್ ಏಜೆನ್ಸಿ’ ನಿರ್ದಿಷ್ಟಪಡಿಸಿದ ಕನ್ನಡ ಪ್ರಾವೀಣ್ಯತೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಅರ್ಹ ಸ್ಥಳೀಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ, ಸರ್ಕಾರ ಅಥವಾ ಅದರ ಏಜೆನ್ಸಿಗಳ ಸಕ್ರಿಯ ಸಹಯೋಗದೊಂದಿಗೆ ಮೂರು ವರ್ಷಗಳೊಳಗೆ ಸಂಸ್ಥೆಗಳು ಅವರಿಗೆ ತರಬೇತಿ ನೀಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

ಸ್ಥಳೀಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ?

ಮೀಸಲಾತಿ ನಿಯಮದಲ್ಲಿ ಉಲ್ಲೇಖಿಸಿದಷ್ಟು ಪ್ರಮಾಣದಲ್ಲಿ ಸ್ಥಳೀಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ, ಕಾಯ್ದೆಯ ನಿಬಂಧನೆಗಳನ್ನು ಸಡಿಲಿಸುವಂತೆ ಕಂಪನಿಗಳು ಸರ್ಕಾರಕ್ಕೆ ಅರ್ಜಿ ಸಲ್ಲಿಸಬಹುದು.

ನಿಯಮ ಉಲ್ಲಂಘನೆಗೆ ದಂಡ ಎಷ್ಟು?

‘ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಉದ್ಯಮ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ಕರ್ನಾಟಕ ರಾಜ್ಯ ಉದ್ಯೋಗ ಮಸೂದೆ 2024’ ನಿಬಂಧನೆಗಳನ್ನು ಉಲ್ಲಂಘಿಸುವ ಯಾವುದೇ ಉದ್ಯೋಗದಾತ ಅಥವಾ ಸಂಸ್ಥೆಯ ವ್ಯವಸ್ಥಾಪಕರು 10,000 ರೂ.ನಿಂದ 25,000 ರೂ. ವರೆಗೆ ದಂಡ ಪಾವತಿಸಬೇಕಾಗುತ್ತದೆ.

ದಂಡವನ್ನು ವಿಧಿಸಿದ ನಂತರವೂ ನಿಯಮ ಉಲ್ಲಂಘನೆ ಮುಂದುವರಿದರೆ, ಮತ್ತಷ್ಟು ದಂಡ ವಿಧಿಸಲಾಗುತ್ತದೆ. ನಂತರದ ಪ್ರತಿ ದಿನಕ್ಕೆ ನೂರು ರೂಪಾಯಿಗಳವರೆಗೆ ದಂಡ ವಿಸ್ತರಿಸಲಾಗುತ್ತದೆ ಎಂದು ಪ್ರಸ್ತಾವಿತ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

ಇತರ ರಾಜ್ಯದ, ವಿದೇಶಿ ಕಂಪನಿಗಳ ಮೇಲೂ ಪರಿಣಾಮ

ಪ್ರಸ್ತಾವಿತ ಮಸೂದೆಯು ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ದೇಶದ ಇತರ ರಾಜ್ಯಗಳ, ವಿದೇಶಗಳ ಕಂಪನಿಗಳಿಗೂ ಅನ್ವಯವಾಗಲಿದೆ. ಆ ಕಂಪನಿಗಳೂ ಸಹ ಮಸೂದೆಯಲ್ಲಿ ಉಲ್ಲೇಖಿಸಿರುವ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗುತ್ತದೆ. ಹೀಗಾಗಿ ಇದೀಗ ಮಸೂದೆ ಕುರಿತು ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಉದ್ಯಮಿಗಳಾದ ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಶಾ ಸಾಮಾಜಿಕ ಮಾಧ್ಯಮ ವೇದಿಕೆ ಮೂಲಕ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಸಂವಿಧಾನ ವಿರೋಧಿ ನಡೆಯಾಗುತ್ತದೆ ಎಂದು ಉದ್ಯಮಿ ಮೋಹನ್ ದಾಸ್ ಪೈ ಸಾಮಾಜಿಕ ಮಾಧ್ಯಮ ಎಕ್ಸ್​ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.