ಚಿತ್ರಿಗಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದ್ವಿಭಾಷಾ ಕಲಿಕೆಗೆ ದಿನಕರ ಶೆಟ್ಟಿ ಚಾಲನೆ

ಕುಮಟಾ : ರಾಜ್ಯದಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಒಂದು ಸರ್ಕಾರಿ ಶಾಲೆ ಎಂಬ ಯೋಜನೆಯನ್ನು ಜಾರಿಗೆ ತಂದರೆ ಮಕ್ಕಳಲ್ಲಿ ಸ್ಪರ್ಧಾತ್ಮಕತೆಯೂ ಬೆಳೆಯುತ್ತದೆ. ಇದರಿಂದ ಶಿಕ್ಷಣದ ಗುಣಮಟ್ಟ, ಮೂಲಸೌಕರ್ಯ ಹಾಗೂ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಲು ಅನುಕೂಲವಾಗುತ್ತದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಪಟ್ಟಣದ ಚಿತ್ರಿಗಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದ್ವಿಭಾಷಾ ಕಲಿಕೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಸರ್ಕಾರಿ ಶಾಲೆಗಳಿಗೆ ಸೌಕರ್ಯಗಳ ಕೊರತೆಯಿಲ್ಲವಾದರೂ ಮಕ್ಕಳ ಸಂಖ್ಯಾಬಲ ಕುಸಿಯುತ್ತಿರುವುದು ಸಮಸ್ಯೆಗೆ ಮೂಲ. ಈ ಕಾರಣಕ್ಕಾಗಿ ಪಂಚಾಯಿತಿ ಮಟ್ಟಕ್ಕೊಂದು ಸುಸಜ್ಜಿತ ಹಾಗೂ ಸುವ್ಯವಸ್ಥಿತ ಶಾಲೆಯನ್ನು ನೀಡಬಹುದು. ಮಕ್ಕಳು ಶಾಲೆಗೆ ಬಂದು ಹೋಗಲು ವಾಹನ ವ್ಯವಸ್ಥೆ ಸಹಿತ ನುರಿತ ಶಿಕ್ಷಕ ಸಂಪನ್ಮೂಲವನ್ನೂ ಯಥೇಚ್ಛ ನೀಡಬಹುದಾಗಿದೆ. ಇದರಿಂದ ಸರ್ಕಾರಕ್ಕೆ ಅನಗತ್ಯ ಹೊರೆಯೂ ವಿಪರೀತ ಕಡಿಮೆಯಾಗಲಿದ್ದು ಈ ಪ್ರಸ್ತಾವನೆಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ನವರಿಗೆ ನೀಡಿದ್ದೇನೆ. ಮುಂಬರುವ ಅಧಿವೇಶನದಲ್ಲೂ ಈ ಬಗ್ಗೆ ಪ್ರಸ್ತಾಪಿಸಲಿದ್ದೇನೆ ಎಂದರು.

ಚಿತ್ರಿಗಿ ಶಾಲೆಯ ಬಗ್ಗೆ ವಿಶೇಷ ಕಾಳಜಿ ಇದೆ ಎಂದು ಶಾಸಕ ದಿನಕರ ಶೆಟ್ಟಿ, ಇಲ್ಲಿ ಊರ ನಾಗರಿಕರ ಸಹಕಾರ ಮಹತ್ವದ್ದಾಗಿದೆ. ಯಾವುದೇ ಸರ್ಕಾರಿ ಶಾಲೆಯ ಉಳಿವು ಮತ್ತು ಬೆಳವಣಿಗೆ ಪಾಲಕರ ಆಸಕ್ತಿ ಅವಲಂಬಿಸಿದೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ಕೊಡಲಾಗಿತ್ತು. ತಾಲೂಕಿನಲ್ಲಿ ೫೦ ಕ್ಕೂ ಹೆಚ್ಚು ಶಾಲಾ ಕೊಠಡಿಗಳನ್ನು ನಿರ್ಮಿಸಿ ಕೊಡಲಾಗಿದೆ. ಹಿಂದೆ ದಿ. ರಾಮಕೃಷ್ಣ ಹೆಗಡೆ ಸಮವಸ್ತ್ರ ಜಾರಿಗೆ ತಂದರೆ, ಎಸ್. ಎಂ. ಕೃಷ್ಣ ಬಿಸಿಯೂಟ ಜಾರಿಗೆ ತಂದರು, ಶಿಕ್ಷಣವಿಲ್ಲದೇ ಯಾವುದೂ ಸಾಧ್ಯವಿಲ್ಲ ಎಂದರು.

ಬಿಆರ್‌ಪಿ ವಿಜಯಲಕ್ಷ್ಮೀ ಭಟ್ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ ಆಂಗ್ಲಮಾಧ್ಯಮ ಕಲಿಕೆ ಇರುವ ೧೭ ಸರ್ಕಾರಿ ಶಾಲೆಗಳಿದ್ದು ಇದೀಗ ಪ್ರಸಕ್ತ ಸಾಲಿಗೆ ೩ ಶಾಲೆಗಳು ಸೇರ್ಪಡೆಯಾಗಿವೆ. ದ್ವಿಭಾಷಾ ಕಲಿಕೆಯ ಮೂಲಕ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ.

ಉದ್ಯಮಿ ಭುವನ ಭಾಗ್ವತ ಮಾತನಾಡಿ, ಚಿತ್ರಗಿ ಶಾಲೆಗೆ ದ್ವಿಭಾಷಾ ಕಲಿಕೆ ಮಂಜೂರಿ ತರುವಲ್ಲಿ ಉಸ್ತುವಾರಿ ಸಚಿವರ ಸಹಕಾರ ಮುಖ್ಯವಾಯಿತು. ಇದರ ಪ್ರಯೋಜನವನ್ನು ಮಕ್ಕಳು ಪಡೆದುಕೊಳ್ಳಲಿ ಎಂದರು.