ಸಿದ್ದಾಪುರ : ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಶನಿವಾರ ಸಿದ್ದಾಪುರದ ತಾಲೂಕಾ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯ ಸಾಮಾನ್ಯ ಸಭೆ ನಡೆಸಿ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುವಂತೆ ಸೂಚಿಸಿದರು.
ಸಣ್ಣ-ಪುಟ್ಟ ಖಾಯಿಲೆಗಳಿಗೆ ಚಿಕಿತ್ಸೆಗೆಂದು ತಾಲೂಕಾ ಆಸ್ಪತ್ರೆಗೆ ಬರುವ ರೋಗಿಗಳನ್ನು ಬೇರೆ ಆಸ್ಪತ್ರೆಗೆ ರೆಫರ್ ಮಾಡುತ್ತಾರೆ ಎಂದು ಜನ ಆರೋಪಿಸುತ್ತಿದ್ದಾರೆ. ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಿ. ಸ್ಥಳೀಯವಾಗಿ ಚಿಕಿತ್ಸೆ ನೀಡಲು ಪ್ರಯತ್ನ ನಡೆಸಿ. ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಸಾರ್ವಜನಿಕರೊಂದಿಗೆ ವೈದ್ಯರು ಹಾಗೂ ಸಿಬ್ಬಂದಿಗಳು ಮೊದಲು ಸೌಜನ್ಯದಿಂದ ಮಾತನಾಡಿಸಿ ಸಮಸ್ಯೆ ಆಲಿಸಿ ಎಂದ ಅವರು, ಆಸ್ಪತ್ರೆಯಿಂದ ಉತ್ತಮ ಸೇವೆ ನೀಡಲು ಆರೋಗ್ಯ ರಕ್ಷಾ ಸಮಿತಿ ಸಂಪೂರ್ಣ ಸಹಕಾರ ನೀಡಲಿದೆ. ಜತೆಗೆ ಸರ್ಕಾರದಿಂದ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲಾಗುವುದು ಎಂದರು.
ಹಿಂದಿನ ಸಭೆಯ ನಡಾವಳಿ ಕುರಿತು ಸದಸ್ಯರು ಹಾಗೂ ವೈದ್ಯರೊಂದಿಗೆ ಚರ್ಚಿಸಿ ರೋಗಿಗಳಿಗೆ ಸೂಕ್ತ ಸ್ಪಂದನೆ ನೀಡಿ ಉತ್ತಮ ಸೇವೆ ನೀಡುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಪ್ರಕಾಶ ಪುರಾಣಿಕ, ತಾಲೂಕಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ತಲಕೊಪ್ಪ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಬಾಲಕೃಷ್ಣ ನಾಯ್ಕ, ಜಿ.ಟಿ.ನಾಯ್ಕ, ಮಂಜುನಾಥ ಹಸ್ಲರ್, ಶಾಂತಿ ಹಸ್ಲರ್, ಚಂದ್ರಶೇಖರ ಗೌಡ, ಜನಾರ್ಧನ ನಾಯ್ಕ ಉಪಸ್ಥಿತರಿದ್ದರು.