ಉಡುಪಿ : ಪಾಪಿ ಚಿರಾಯು, ಆದರೆ ಸಜ್ಜನರನ್ನು ದೇವರು ಬೇಗ ಕರೆಸಿಕೊಳ್ಳುತ್ತಾನೆ ಅಂತ ಹೇಳೋದು ನಿಜ. 54 ಖಂಡಿತ ಸಾಯುವ ವಯಸ್ಸಲ್ಲ. ಫಿಟ್ನೆಸ್ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದ ಮತ್ತು ವೃತ್ತಿಯಿಂದ ವೈದ್ಯರಾಗಿದ್ದವರು ಹೃದಯಾಘಾತಕ್ಕೆ ಬಲಿಯಾಗುವುದು ಆಘಾತಕಾರಿ. ಕುಂದಾಪುರದಲ್ಲಿ ಶ್ರೀಮಾತಾ ಖಾಸಗಿ ಆಸ್ಪತ್ರೆಯನ್ನು ನಡೆಸುತ್ತಿದ್ದ ಡಾ ಸತೀಶ್ ಪೂಜಾರಿ ಅವರು ಹಾರ್ಟ್ ಅಟ್ಯಾಕ್ ನಿಂದ ನಿಧನ ಹೊಂದಿರುವ ಸಂಗತಿ ಅವರನ್ನು ಬಲ್ಲ ಜನಕ್ಕೆ ನಂಬಲಾಗುತ್ತಿಲ್ಲ. ಫಿಟ್ನೆಸ್ ಕಡೆ ಹೆಚ್ಚು ಗಮನ ನೀಡುತ್ತಿದ್ದ ಮತ್ತು ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ಹೆಚ್ಚು ತೊಡಸಿಸಿಕೊಂಡಿದ್ದ ಡಾ ಪೂಜಾರಿ ಕುಂದಾಪುರ ಮತ್ತು ಉಡುಪಿ ಭಾಗಗಳಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದರು. ವೈದ್ಯರಾಗಿದ್ದರೂ ಡಾ ಪೂಜಾರಿ ವಿಭಿನ್ನ ಹಾಡುಗಾರಿಕೆ ಮೂಲಕವೂ ಜನಪ್ರಿಯರಾಗಿದ್ದರು. ವಿಶ್ವವಿಖ್ಯಾತ ಗಾಯಕಿ ಎಸ್ ಜಾನಕಿ ಮತ್ತು ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಜೊತೆ ಸಂಗೀತ ಕಾರ್ಯಕ್ರಮಗಳಲ್ಲಿ ಡಾ ಪೂಜಾರಿ ಹಾಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.