ಶಿಕ್ಷಣ ಸಚಿವರ ಎಚ್ಚರಿಕೆ ನಂತರವೂ ವಿದ್ಯಾರ್ಥಿಯಿಂದ ಶೌಚಾಲಯ ಸ್ವಚ್ಛಗೊಳಿಸಿದ ದೈಹಿಕ ಶಿಕ್ಷಕ

ಉಡುಪಿ, ಜುಲೈ 05: ಉಡುಪಿಯ ನಿಟ್ಟೂರು ಅನುದಾನಿತ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ವಿದ್ಯಾರ್ಥಿಯಿಂದ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ. ವಿದ್ಯಾರ್ಥಿ ಶೌಚಾಲಯ ಸ್ವಚ್ಛ ಮಾಡುವ ದೃಶ್ಯ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿದ್ಯಾರ್ಥಿ ಪೊರಕೆ ಶೌಚಾಯಲ ಹಿಡಿದು ಸ್ವಚ್ಛ ಮಾಡುತ್ತಿದ್ದು, ದೈಹಿಕ ಶಿಕ್ಷಕ ನೀರು ಹಾಕುತ್ತಿದ್ದಾನೆ.

ಕಳೆದ ವರ್ಷ ಡಿಸೆಂಬರ್​ ತಿಂಗಳಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಗುಡ್ಡದ ನೇರಳೆಕೆರೆ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛ ಮಾಡಿಸಲಾಗಿತ್ತು. ಈ ಸಂಬಂಧ ವಿಡಿಯೋ ವೈರಲ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆ ಮುಖ್ಯಗುರುಗಳನ್ನು ಸಸ್ಪೆಂಡ್ ಮಾಡಲಾಗಿದೆ.

ಇದಾದ ನಂತರ ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಯೊಂದರಲ್ಲೂ ಸಹ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಲಾಗಿತ್ತು. ಈ ಸಂಬಂಧ ತಪ್ಪಿಸ್ಥರನ್ನು ಅಮಾನತು ಮಾಡಲಾಗಿತ್ತು. ಅಲ್ಲದೇ ಪ್ರಕರಣ ಸಹ ದಾಖಲಾಗಿತ್ತು.

ಹೀಗೆ ಮೇಲಿಂದ ಮೇಲೆ ಇಂತಹ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ತಪಿಸ್ಥತ ಶಿಕ್ಷಕರನ್ನು ಸಸ್ಪೆಂಡ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಕರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ, ಶಾಲೆಯಲ್ಲಿ ಸ್ವಚ್ಛಗೊಳಿಸುವ ಸಿಬ್ಬಂದಿ ಇಲ್ಲ. ಕೂಡಲೇ ಶಾಲೆಗಳಿಗೆ ಸ್ವಚ್ಛತೆ ಮಾಡುವವರನ್ನು ನೇಮಕ ಮಾಡಬೇಕೆಂದು ಮನವಿ ಮಾಡಿತ್ತು.

ಶಾಲೆ ಸ್ವಚ್ಛತೆ ಹೊಣೆ ಎಸ್​ಡಿಎಂಸಿ ಸಮಿತಿಗೆ: ಮಧು

ಈ ಘಟನೆಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಾಲೆ ಸ್ವಚ್ಛಗೊಳಿಸುವ ಜವಾಬ್ದಾರಿಯನ್ನು ಎಸ್​ಡಿಎಂಸಿ ಸಮಿತಿಗೆ ನೀಡುವ ತೀರ್ಮಾನಕ್ಕೆ ಬಂದಿದ್ದರು. ಶೌಚಾಲಯ ಸ್ವಚ್ಛತೆ ಜವಾಬ್ದಾರಿಯನ್ನು ಎಸ್‌ಡಿಎಂಸಿ ತೆಗೆದುಕೊಳ್ಳಬೇಕು. ಈ ಸಂಬಂಧ ಅಧಿಸೂಚನೆ ಹೊರಡಿಸುತ್ತೇವೆ ಎಂದು ಹೇಳಿದ್ದರು.

ಶಾಲೆಯ ಮಕ್ಕಳಿಂದ ಯಾವುದೇ ಕೆಲಸ ಮಾಡಿಸಬಾರದು. ಕೆಟ್ಟ ಕಲಸಗಳನ್ನು ಮಾಡಿದ ಇಲಾಖೆಗೆ, ರಾಜ್ಯಸರ್ಕಾರಕ್ಕೆ ಕೆಟ್ಟ ಹೆಸರು ಬರಲು ಕಾರಣವಾಗುತ್ತೆ. ಹೀಗಾಗಿ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.