ರಾಹುಲ್ ಗಾಂಧಿ ಸಮಸ್ತ ಹಿಂದುಗಳ ಕ್ಷಮೆ ಕೇಳಲಿ – ಸದಾನಂದ್‌ ಭಟ್‌ ಆಗ್ರಹ

ರಾಹುಲ್ ಗಾಂಧಿ ಸಮಸ್ತ ಹಿಂದುಗಳ ಕ್ಷಮೆ ಕೇಳಬೇಕೆಂದು, ಉತ್ತರ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರರಾದ ಸದಾನಂದ್‌ ಭಟ್‌ ಆಗ್ರಹಿಸಿದ್ದಾರೆ.

ಶಿರಸಿ, ಜುಲೈ 02 : ರಾಹುಲ್ ಗಾಂಧಿ ಸಮಸ್ತ ಹಿಂದುಗಳ ಕ್ಷಮೆ ಕೇಳಬೇಕೆಂದು, ಉತ್ತರ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರರಾದ ಸದಾನಂದ್‌ ಭಟ್‌ ಆಗ್ರಹಿಸಿದ್ದಾರೆ. ರಾಹುಲ್‌ ಗಾಂಧಿ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರೋ ಅಥವಾ ಹಿಂದೂ ವಿರೋಧಿ ಪಕ್ಷದ ನಾಯಕನೇ? ಸಂಸತ್ತಿನಲ್ಲಿ ಪ್ರತಿಪಕ್ಷದ ನಾಯಕನಾಗಿರುವ ರಾಹುಲ್ ಗಾಂಧಿ, ರಾಷ್ಟ್ರಪತಿಗಳ  ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡುವ ಸಂದರ್ಭದಲ್ಲಿ ತನ್ನ ಸ್ಥಾನದ ಜವಾಬ್ದಾರಿಯನ್ನು ಮರೆತು ಭಾರತ ದೇಶದ ಮತ್ತು ಹಿಂದುಗಳ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಹಿಂದುಗಳು  ಹಿಂಸಾಚಾರವನ್ನು ಬೆಂಬಲಿಸುತ್ತಾರೆ ಎನ್ನುವ, ಬಾಲಿಶ ಹೇಳಿಕೆಯಿಂದ ಹಿಂದುಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಸದಾನಂದ್‌ ಭಟ್‌ ಹೇಳಿದರು…

ತಮ್ಮ ಸಂಸದ ಸ್ಥಾನದ ಜವಾಬ್ದಾರಿ ಮತ್ತು ಘನತೆಯನ್ನು ಮರೆತು ಸಂಸತ್ತಿನಲ್ಲಿ ಹಿಂದೂ ದೇವರ ಫೋಟೋವನ್ನು ಪ್ರದರ್ಶಿಸಿ ತಮ್ಮ ಪಕ್ಷದ ಚಿಹ್ನೆಗೂ ದೇವರುಗಳ ನಡುವಿನ ಹೋಲಿಕೆ ಮಾಡಿಕೊಂಡಿರುವುದು ಸರಿಯಲ್ಲ. ಸಂಸತ್ತಿನಲ್ಲಿ ದಾಖಲೆಗಳನ್ನು ಆಧರಿಸಿ ಮಾತನಾಡದೆ ಕೇವಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಜೆಪಿಯನ್ನು ಆರ್ ಎಸ್ ಎಸ್ ಅನ್ನು ಮನಬಂದಂತೆ ನಿಂದಿಸಿ ಮಾತನಾಡಲು ಪ್ರತಿಪಕ್ಷ ನಾಯಕನ ಸ್ಥಾನವನ್ನು ಬಳಸಿಕೊಂಡಿರುವುದು ಮತ್ತು ಸತ್ಯಕ್ಕೆ ದೂರವಾದ ವಿಚಾರಗಳನ್ನು ಇದೇ ಸತ್ಯ ಎನ್ನುವ ರೀತಿಯಲ್ಲಿ ಮಾತನಾಡುವುದನ್ನು ಸಂವಿಧಾನ ಅವರಿಗೆ ಹೇಳಿಕೊಟ್ಟಿದೆಯೇ.? ಎಂದು ಸದಾನಂದ್‌ ಭಟ್ಟರು ಪ್ರಶ್ನಿಸಿದರು…

ಎಲ್ಲಾ ಸಂದರ್ಭದಲ್ಲೂ ತಾವೇ ಸಂವಿಧಾನ ರಕ್ಷಕರು ಎಂದುಕೊಳ್ಳುವ ಸೋಗಲಾಡಿ ಮನೋಭಾವನೆಯ ಕಾಂಗ್ರೆಸ್ ನಾಯಕರು, ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಮಂಡಿಸುವ ಸಂದರ್ಭದಲ್ಲಿ ತಮ್ಮ ನಿಜವಾದ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ .  ಅಸಂಖ್ಯ ಹಿಂದೂಗಳ ಭಾವನೆಗೆ ನೋವನ್ನುಂಟು ಮಾಡುವಂತೆ ಮಾತನಾಡಿ, ಎಂದಿನಂತೆ ಮನ ಬಂದಂತೆ ಮಾತನಾಡಿಕೊಂಡು ಕೊನೆಗೆ ಅದಕ್ಕೆ ಬೇರೆ ರೀತಿಯಲ್ಲಿ  ಸ್ಪಷ್ಟೀಕರಣ ನೀಡುವ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿಗರು ಹಿಂದುಗಳ ಬಗ್ಗೆ ತಮಗಿರುವ ಭಾವನೆ ಏನು ಎಂಬುದನ್ನು ಸಂಸತ್ತಿನಲ್ಲಿ ಮೊದಲ ಅಧಿವೇಶನದಲ್ಲಿಯೇ ಪ್ರದರ್ಶಿಸಿದ್ದಾರೆ ಎಂದು ಹೇಳಿದರು…

ಹಿಂದೂಗಳ ಭಾವನೆಗೆ ನೋವುಂಟು ಮಾಡುವ ರಾಹುಲ್ ಗಾಂಧಿ ಅವರ ಈ ಹೇಳಿಕೆಯನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ. ಮತ್ತು ಸದನದಲ್ಲಿ ಸಮಸ್ತ ಹಿಂದುಗಳನ್ನು ಕ್ಷಮೆ ಯಾಚಿಸಲು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿಗೆ ಆಗ್ರಹಿಸುತ್ತೇವೆ. ರಾಷ್ಟ್ರದ ಉನ್ನತಿಗೆ, ಐಕ್ಯತೆಗೆ ಶ್ರಮಿಸುತ್ತಿರುವ ಏನ್‌ಡಿಎ ಮೈತ್ರಿಕೂಟದ ಅಭಿವೃದ್ಧಿ ಚಟುವಟಿಕೆಗಳನ್ನು ಸಹಿಸಲಾಗದೆ, ಕೇವಲ ತುಷ್ಟಿಕರಣದ ರಾಜಕಾರಣ ಮಾಡುತ್ತಾ ಬಂದಿರುವ ಕಾಂಗ್ರೆಸ್ ಬಹುಜನರ ಭಾವನೆಗಳಿಗೆ ಗೌರವವನ್ನು ನೀಡಿ ರಾಷ್ಟ್ರದಲ್ಲಿ ಅಭಿವೃದ್ಧಿ ಪರವಾದ ಮೌಲ್ಯಯುತ ರಾಜಕಾರಣವನ್ನು ಮಾಡಲಿ ಎಂದು ಹೇಳಿದರು..

ಕೇವಲ ಮನಬಂದಂತೆ ಮಾತನಾಡದೆ, ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ತನ್ನ ಸ್ಥಾನದ ಮಹತ್ವಕ್ಕೆ ಅನುಗುಣವಾಗಿ ಸಂಸತ್ತಿನ ನಿಯಮಾವಳಿಗಳಿಗೆ ಒಳಪಟ್ಟು ನಡೆದುಕೊಳ್ಳುವುದನ್ನು ಕಾಂಗ್ರೆಸ್ ಮತ್ತು ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ರೂಡಿಸಿಕೊಳ್ಳಲಿ. ಮುಂದಿನ ದಿನದಲ್ಲಿ ಹಿಂದೂಗಳ ಭಾವನೆಗೆ ಗೌರವಕ್ಕೆ ಧಕ್ಕೆ ಮತ್ತು ಚ್ಯು ತಿ ಬರುವ ರೀತಿ ಸಂಸತ್ತಿನ ಒಳಗೆ ಮತ್ತು ಹೊರಗಡೆಯಲ್ಲಿ  ಕಾಂಗ್ರೆಸ್ ಮತ್ತು ಕಾಂಗ್ರೆಸ್ಸಿನ ನಾಯಕರು ಇದೇ ರೀತಿ ತಮ್ಮ ಮಾತನ್ನು ಮುಂದುವರೆಸಿದಲ್ಲಿ ಬಿಜೆಪಿ ಹಿಂದೂಗಳ ಪರವಾಗಿ ಬಲವಾದ ಹೋರಾಟವನ್ನು ಕೈಗೊಳ್ಳುತ್ತದೆ.  ಕಾಂಗ್ರೆಸ್ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡದೆ ಹಿಂದುಗಳ ಭಾವನೆಗೆ ಗೌರವ ನೀಡುವುದನ್ನು ರೂಡಿಸಿಕೊಳ್ಳಲಿ ಎಂದು ಸದಾನಂದ್‌ ಭಟ್ ಹೇಳಿದರು.