ವಿಪರೀತ ಮಳೆಯಿಂದ ಆಗುಂಬೆ ಘಾಟ್ ನಲ್ಲಿ ಭೂಕುಸಿತದ ಭೀತಿ ಎದುರಾಗಿದ್ದು, ಈ ಹಿನ್ನೆಲೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಮತ್ತು ಭಾರೀ ವಾಹನಗಳ ದಟ್ಟಣೆಯಿಂದ ಉಂಟಾದ ಸುರಕ್ಷತಾ ಕಾಳಜಿಗಳನ್ನು ಉಲ್ಲೇಖಿಸಿ ಆಗುಂಬೆ ಘಾಟ್‌ನಲ್ಲಿ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 115 ಮತ್ತು ಕರ್ನಾಟಕ ಮೋಟಾರು ವಾಹನ ಕಾಯ್ದೆ 1989ರ ಸೆಕ್ಷನ್ 221(ಎ)(2) ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಸೆಪ್ಟೆಂಬರ್ 15ರವರೆಗೆ ಆಗುಂಬೆ ಘಾಟ್‌ನಲ್ಲಿ ವಾಹನ ಸಂಚಾರ ನಿಷೇಧ ಜಾರಿಯಲ್ಲಿರಲಿದೆ. ಆಗುಂಬೆ ಘಾಟ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 169 ಎಯ ತೀರ್ಥಹಳ್ಳಿ-ಮಲ್ಪೆ ರಸ್ತೆಯಲ್ಲಿ ಲಘು ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ.
ತೀರ್ಥಹಳ್ಳಿಯಿಂದ ಉಡುಪಿಗೆ ತೆರಳುವ ಭಾರಿ ವಾಹನಗಳು ತೀರ್ಥಹಳ್ಳಿ-ಮಾಸ್ತಿಕಟ್ಟೆ-ಸಿದ್ದಾಪುರ-ಕುಂದಾಪುರ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ. ವ್ಯತಿರಿಕ್ತವಾಗಿ ಉಡುಪಿಯಿಂದ ತೀರ್ಥಹಳ್ಳಿಗೆ ತೆರಳುವ ಭಾರಿ ವಾಹನಗಳು ಉಡುಪಿ-ಕುಂದಾಪುರ-ಸಿದ್ದಾಪುರ-ಮಾಸ್ತಿಕಟ್ಟೆ ಮಾರ್ಗವಾಗಿ ಸಂಚರಿಸಬೇಕು ಎಂದು ತಿಳಿಸಲಾಗಿದೆ.
ಒಂದು ವೇಳೆ ಭೂಕುಸಿತಗಳು ಆದಲ್ಲಿ ಅಪಾಯಗಳನ್ನು ತಗ್ಗಿಸಲು, ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಹಾನಿಯನ್ನು ಕಡಿಮೆ ಮಾಡಲು, ಅಧಿಕಾರಿಗಳು ಎಲ್ಲಾ ವಾಹನ ಚಾಲಕರು ನಿರ್ಬಂಧವನ್ನು ಅನುಸರಿಸಲು ಮತ್ತು ನಿಗದಿತ ದಿನಾಂಕದವರೆಗೆ ನಿರ್ದಿಷ್ಟಪಡಿಸಿದಂತೆ ಪರ್ಯಾಯ ಮಾರ್ಗಗಳನ್ನು ಬಳಸಲು ಸೂಚನೆ ನೀಡಲಾಗಿದೆ.