ರಾಜ್ಯದೆಲ್ಲೆಡೆ ಮಳೆಯ ಅಬ್ಬರ ಮುಂದುವರೆದಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗಂಗಾವಳಿ ನದಿ ಪಕ್ಕದ ಗ್ರಾಮಗಳ ಸಂಪರ್ಕ ಸೇತುವೆ ಮುಳುಗುಡೆ ಗೊಂಡಿದ್ದು, ಪ್ರಾಣವನ್ನೂ ಲೆಕ್ಕಿಸದೆ ಮುಳುಗಿದ ಸೇತುವೆ ಮೂಲಕ ಗ್ರಾಮಸ್ಥರು ಸಂಚರಿಸುತ್ತಿದ್ದಾರೆ. ಐದಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಷ್ಟವಾಗಿದೆ. ಮುಳುಗಿದ ಸೇತುವೆಯಲ್ಲೇ ಜನರು ಅಪಾಯಕಾರಿ ಪ್ರಯಾಣ ಮಾಡುತ್ತಿರುವುದು ಆತಂಕ ಹೆಚ್ಚಿಸಿದೆ.
ಕಾರವಾರ, ಜುಲೈ 2: ಮೈದುಂಬಿ ಹರಿಯುತ್ತಿರುವ ಗಂಗಾವಳಿ ನದಿ, ಅದರ ನೀರಿನಲ್ಲಿ ಮುಳುಗಡೆ ಗೊಂಡಿರುವ ಸೇತುವೆ. ಅದೇ ಸೇತುವೆ ಮೂಲಕ ಸಂಚರಿಸುತ್ತಿರುವ ಜನರು. ಈ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ. ಕಳೆದ ಮೂರು ವರ್ಷಗಳ ಹಿಂದೆ ಗ್ರಾಮಸ್ಥರ ಒತ್ತಾಯದ ಮೇರೆಗೆ ನಿರ್ಮಿಸಿರುವ ಸೇತುವೆ ಸದ್ಯ ಮುಳುಗುಡೆಯಾಗಿದ್ದು ಐದಕ್ಕೂ ಹೆಚ್ಚು ಗ್ರಾಮಗಳ ಜನರು ಪ್ರಾಣ ಭಯದಲ್ಲೇ ಸಂಚರಿಸುವಂತಾಗಿದೆ.
ಕಾಡಂಚಿನ ಗ್ರಾಮಗಳಿಗೆ ಸಂಪರ್ಕ ಕಡಿತದ ಭೀತಿ
ಗಂಗಾವಳಿ ನದಿಗೆ ಹೊಂದಿಕೊಂಡಿರುವ ಕಾಡಂಚಿನ ಗ್ರಾಮಗಳಾದ ಗುಳ್ಳಾಪುರ, ಕಲ್ಲೆಶ್ವರ, ಹಳವಳ್ಳಿ ಪಣಸಗುಳಿ, ಶೇವ್ ಕಾರ್ ಹಾಗೂ ಕೈಗಡಿ, ಸೇರಿದಂತೆ ಒಟ್ಟು ಆರು ಗ್ರಾಮಗಳಲ್ಲಿ ಸೂಕ್ತ ಮೂಲ ಸೌಕರ್ಯ ಇಲ್ಲದ ಕಾರಣ, ಶಿಕ್ಷಣ ಆರೋಗ್ಯ, ಬ್ಯಾಂಕ್ ವ್ಯವಹಾರ, ಗ್ರಾಮ ಪಂಚಾಯತಿ ಕೆಲಸ ಸೇರಿದಂತೆ ಅಗತ್ಯ ಕೆಲಸಕ್ಕಾಗಿ ಇಡಗುಂದಿ ಗ್ರಾಮಕ್ಕೆ ಬರ ಬೇಕಾಗುತ್ತದೆ. ಪರ್ಯಾಯವಾಗಿ ಇನ್ನೊಂದು ಮಾರ್ಗವಿದ್ದು ಆ ಮಾರ್ಗದಿಂದ ಹೋಗಬೇಕಾದರೆ ಸುಮಾರು 30 ಕಿಮೀ ಸಂಚರಿಸಬೇಕಾಗುತ್ತದೆ. ಹಾಗಾಗಿ ಪ್ರಾಣಭಯ ಲೆಕ್ಕಿಸದೆ ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರೆಲ್ಲರೂ ಮುಳುಗುಡೆಗೊಂಡ ಸೆತುವೆ ಮೂಲಕ ನಿತ್ಯ ಸಂಚರಿಸುತ್ತಿದ್ದಾರೆ.
ಕಳೆದ ಐದು ವರ್ಷಗಳ ಹಿಂದೆ ಧಾರಕಾರವಾಗಿ ಸುರಿದ ಮಳೆಗೆ ಸೇತುವೆ ಸಂಪೂರ್ಣವಾಗಿ ಹಾಳಾಗಿತ್ತು. ನಿತ್ಯ ಚಿಕ್ಕ ದೋಣಿಯಲ್ಲಿ ಓಡಾಟ ಮಾಡಬೇಕಾದ ಪರಿಸ್ತಿತಿ ಉದ್ಭವಿಸಿತ್ತು. ಸಣ್ಣ ಪುಟ್ಟ ಕೆಲಸಕ್ಕೂ ದೋಣಿ ಮೂಲಕ ನದಿ ದಾಟುವುದು ಕಷ್ಟ ಎಂಬುವುದನ್ನ ಅರಿತ ಗ್ರಾಮಸ್ಥರು, ತಮ್ಮ ಸ್ವಂತ ಹಣದಲ್ಲೆ ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಅವಶ್ಯಕತೆ ಇದ್ದಷ್ಟು ಹಣ ಕ್ರೋಡೀಕರಣ ಆಗಿರಲಿಲ್ಲ.
ಆ ಸಂದರ್ಭದಲ್ಲಿ ಶಾಸಕ ಶಿವರಾಂ ಹೆಬ್ಬಾರ್ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿಕೊಟ್ಟು, ದೊಡ್ಡ ಸೇತುವೆ ಆದಷ್ಟು ಬೇಗ ಮಾಡಿಕೊಡುವುದಾಗಿ ಭರವಸೆಯನ್ನು ಕೊಟ್ಟಿದ್ದರು. ಆದರೆ ಇದುವರೆಗೂ ದೊಡ್ಡ ಸೇತುವೆ ನಿರ್ಮಾಣ ಆಗದ ಹಿನ್ನೆಲೆ ತಾತ್ಕಾಲಿಕ ಸೇತುವೆಯೇ ಖಾಯಂ ಸೇತುವೆ ಆಗಿದ್ದು, ಪ್ರಾಣ ಲೆಕ್ಕಸದೆ ನದಿ ದಾಟುತ್ತಾ ಜೀವನ ಸಾಗಿಸುವ ಪರಿಸ್ಥಿತಿ ಉಂಟಾಗಿದೆ.
ಒಟ್ಟಾರೆಯಾಗಿ ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಜನ ಸಂಕಷ್ಟಕ್ಕೀಡಾಗಿದ್ದಾರೆ. ಈ ಮಧ್ಯೆ, ಈಗಾಗಲೇ ಸೇತುವೆ ಮುಳುಗುಡೆ ಗೊಂಡಿದ್ದು, ಮುಂದೆ ಇನ್ನಷ್ಟು ಮಳೆ ಸುರಿದಾಗ ಸೇತುವೆ ಸಂಪೂರ್ಣ ಮುಳುಗಡೆಗೊಂಡು ಸಂಪರ್ಕ ಕಡಿತಗೊಳ್ಳುವ ಆತಂಕದಲ್ಲೇ ಗ್ರಾಮಸ್ಥರು ಕಾಲ ಕಳೆಯುವಂತಾಗಿದೆ.