‘ತ್ರಿವರ್ಣ’ದಲ್ಲಿ ಕಂಗೊಳಿಸುತ್ತಿರೋ ಮಿರ್ಜಾನ್ ಫೋರ್ಟ್.! ವಿದ್ಯುತ್ ದೀಪಗಳಿಂದ ಸಿಂಗಾರಗೊಂಡ ಐತಿಹಾಸಿಕ ಕೋಟೆ.!

ಸ್ವಾತಂತ್ರೋತ್ಸವದ ಸಂಭ್ರಮ ಎಲ್ಲೆಡೆ ರಂಗು ಪಡೆಯುತ್ತಿರುವಾಗಲೇ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಐತಿಹಾಸಿಕ ಮಿರ್ಜಾನ್ ಕೋಟೆ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿದೆ. ತ್ರಿವರ್ಣ ದ್ವಜದ ರಂಗಿನಿಂದ ವಿದ್ಯುತ್ ಅಲಂಕಾರ ಕೋಟೆಯಲ್ಲಿ ಮೇಳೈಸಿದ್ದು ಇದೀಗ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ತ್ರಿವರ್ಣ ಧ್ವಜದ ರಂಗಿನಲ್ಲಿ ಕಂಗೊಳಿಸುತ್ತಿರುವ ಮಿರ್ಜಾನ್ ಫೋರ್ಟ್.!

ಹೌದು.! ಆಜಾದಿಕಾ ಅಮೃತ್ ಮಹೋತ್ಸವ್ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ್ ನ 16 ನೇ ಶತಮಾನದಲ್ಲಿ ಕಾಳುಮೆಣಸಿನ ರಾಣಿ ಕಟ್ಟಿಸಿದ ಕೋಟೆ ಇದೀಗ ರಾಷ್ಟ್ರ ಧ್ವಜದ ಬಣ್ಣದಿಂದ ಕಂಗೊಳಿಸುತ್ತಿದೆ. ಇದರ ಅಂದದ ಸೊಬಗಿಗೆ ಖುದ್ದು ಮುಖ್ಯಮಂತ್ರಿಗಳೇ ಟ್ವೀಟ್ ಮಾಡಿ ಮೆಚ್ಚಿಗೆ ವ್ಯಕ್ತಪಡಿಸಿದ್ದು ಇದೀಗ ಆಕರ್ಷಣೀಯ ಕೇಂದ್ರವಾಗಿ ಮಾರ್ಪಟ್ಟಿದೆ.

ಐತಿಹಾಸಿಕ ಕೋಟೆಗೆ ವಿದ್ಯುತ್ ದೀಪಾಲಂಕಾರ.! ಮಿರ್ಜಾನ್ ಕೋಟೆ ಮಿಂಚಿಂಗ್.!

ಕುಮಟಾ ತಾಲೂಕಿನ ಮಿರ್ಜಾನ್ ಕೋಟೆಯನ್ನು ಕಾಳು ಮೆಣಸಿನ ರಾಣಿ ಎಂದೇ ಪ್ರಸಿದ್ಧವಾಗಿರುವ ರಾಣಿ ಚನ್ನಬೈರಾದೇವಿ 16 ನೇ ಶತಮಾನದಲ್ಲಿ ನಿರ್ಮಿಸಿದ್ದಳು. ಈ ಕೋಟೆ ದಕ್ಷಿಣ ಹಾಗೂ ಮೊಘಲ್ ವಾಸ್ತುಶೈಲಿಯ ಮಿಶ್ರಣವಾಗಿದ್ದು, ಸ್ಥಳೀಯ ಕೆಂಪು ಕಲ್ಲಿನಿಂದ ನಿರ್ಮಿಸಲಾಗಿದೆ. ನೋಡುಗರಿಗೆ ದೆಹಲಿಯ ಕೆಂಪುಕೋಟೆಯನ್ನು ಹೋಲುವಂತಿದ್ದು ಅಘನಾಶಿನಿ ನದಿ ತಡದಲ್ಲಿದೆ. ಇಂದಿಗೂ ಸಹ ಸುಸ್ಥಿತಿಯಲ್ಲಿರುವ ಈ ಕೋಟೆ ಜಿಲ್ಲೆಯ ಪ್ರವಾಸಿ ಸ್ಥಳಗಳಲ್ಲೊಂದು.

3 ಸಾವಿರಕ್ಕೂ ಹೆಚ್ಚು ಹೈ ಓಲ್ಟೇಜ್ ಬಲ್ಬ್ ಬಳಸಿ ಅಲಂಕಾರ

ಇದೇ ಮೊದಲಬಾರಿಗೆ ಮಿರ್ಜಾನ್ ಕೋಟೆಗೆ ರಾಷ್ಟ್ರದ್ವಜದ ಬಣ್ಣದ ವಿದ್ಯುತ್ ಅಲಂಕಾರ ಮಾಡಿದ್ದು, ಸುಮಾರು ಮೂರು ಸಾವಿರಕ್ಕೂ ಹೆಚ್ಚು ಹೈ ಓಲ್ಟೇಜ್ ಬಲ್ಪ್ ಗಳನ್ನು ಬಳಸಿ ಅಲಂಕಾರ ಮಾಡಲಾಗಿದೆ. ತ್ರಿವರ್ಣದ ವಿದ್ಯುತ್ ಅಲಂಕಾರ ಕೋಟೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಪುರಾತತ್ವ ಇಲಾಖೆಯಿಂದ ವಿದ್ಯುತ್ ದೀಪಾಲಂಕಾರ.!

ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆಯ ಅಡಿಯಲ್ಲಿ ಬರುವ ರಾಜ್ಯದ ಹಲವು ಪ್ರಸಿದ್ಧ ಸ್ಥಳಗಳಲ್ಲಿ ಇದೀಗ ರಾಷ್ಟ್ರದ್ವಜದ ಬಣ್ಣದ ವಿದ್ಯುತ್ ಅಲಂಕಾರ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ಜಿಲ್ಲೆಯ ಮಿರ್ಜಾನ್ ಕೋಟೆಯಲ್ಲಿ ವಿದ್ಯುತ್ ಅಲಂಕಾರ ಮಾಡಿರುವುದು ಜಿಲ್ಲೆಯ ಜನರ ಹಾಗೂ ಪ್ರವಾಸಿಗರ ಮೆಚ್ಚುಗೆಗೆ ಕಾರಣವಾಗಿದೆ.