ಚಿಕ್ಕೋಡಿ: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆಯಾಗುತ್ತಿದೆ. ಈ ನಡುವೆ ಕಾಂಗ್ರೆಸ್ ನ ಪ್ರಬಲ ನಾಯಕ, ಸಚಿವ ಸತೀಶ್ ಜಾರಕಿಹೊಳಿ ಅವರು ಹೊಸ ಬಾಂಬ್ ಸಿಡಿಸಿದ್ದು, 2028ಕ್ಕೆ ನಾನೇ ರಾಜ್ಯದ ಸಿಎಂ ಆಗುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಕೆಂಪೇಗೌಡ ಜಯಂತಿ ದಿನ ಚಂದ್ರಶೇಖರನಾಥ ಸ್ವಾಮೀಜಿಗಳು ನೀಡಿದ ರಾಜಕೀಯ ಪ್ರೇರಿತ ಹೇಳಿಕೆ ಸಿಎಂ ಬದಲಾವಣೆಯ ಚರ್ಚೆ ಹುಟ್ಟು ಹಾಕಿತ್ತು. ಇದರಿಂದಾಗಿ ಇದೀಗ ಬೇರೆ ಬೇರೆ ಸಮುದಾಯಗಳ ಸ್ವಾಮೀಜಿಗಳು ತಮ್ಮ ಜಾತಿಯವರನ್ನು ಸಿಎಂ ಮಾಡಿ ಎಂದು ಬೇಡಿಕೆಯಿಟ್ಟಿದ್ದಾರೆ. ಇದರ ಬೆನ್ನಲ್ಲೇ, ಮುಂದಿನ ಚುನಾವಣೆ ಬಳಿಕ ನಾನೇ ಸಿಎಂ ಎಂದು ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದು, ಡಿ.ಕೆ.ಶಿವಕುಮಾರ್ ಗೆ ಟಾಂಗ್ ನೀಡಿದ್ದಾರೆ.
ಚಿಕ್ಕೋಡಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು ‘2028ರಲ್ಲಿ ನಾನು ಕೂಡ ಮುಖ್ಯಮಂತ್ರಿಯಾಗಲು ಹಕ್ಕು ಮಂಡಿಸುತ್ತೇನೆ. ಆಗಿನ ಚುನಾವಣೆ ಫಲಿತಾಂಶದ ಬಳಿಕದ ಪರಿಸ್ಥಿತಿ ನೋಡಿಕೊಂಡು ಏನು ಮಾಡಬೇಕು ಅದನ್ನು ಮಾಡುವೆ ಎಂದಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಗಿದುಹೋಗಿದೆ. ಸಿಎಂ ಬದಲಾವಣೆ ವಿಚಾರವು ಹೈಕಮಾಂಡ್ ತೀರ್ಮಾನವಾಗಿದೆ. ಡಿಸಿಎಂಗಳ ವಿಚಾರವೂ ಚುನಾವಣೆಗೆ ಮೊದಲು ಕೇಳಿಬಂದಿತ್ತು. ಈಗ ಮಾಡಬೇಕಾ, ಬೇಡವಾ ಎಂಬುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ ಎಂದು ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.