ನವದೆಹಲಿ ಜೂನ್ 30 : ಮೂರನೇ ಬಾರಿ ಪ್ರಧಾನ ಮಂತ್ರಿ ಸ್ಥಾನ ಅಲಂಕರಿಸಿರುವ ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದ ಮೂಲಕ ದೇಶದ ಜನತೆ ಮಾತನಾಡಿದರು. ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಧಾನಿಗಳು ಮಾತನಾಡುವ ಕಾರ್ಯಕ್ರಮವನ್ನು ಮನ್ ಕಿ ಬಾತ್ ಎಂದು ಕರೆಯಲಾಗುತ್ತದೆ. ಪ್ರಧಾನಿ ಸ್ಥಾನ ಅಲಂಕರಿಸಿದ ಬಳಿಕ ಜೂನ್ 30ರಂದು ಮನ್ ಕಿ ಕಾರ್ಯಕ್ರಮ ಪುನರಾರಂಭವಾಗಲಿದೆ ಎಂದು ಘೋಷಣೆ ಮಾಡಿದ್ದರು. ಕೊನೆಯ ಬಾರಿ ಅಂದ್ರೆ ಫೆಬ್ರವರಿ 25ರಂದು ಮನ್ ಕಿ ಬಾತ್ ಕಾರ್ಯಕ್ರಮ ಪ್ರಸಾರವಾಗಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆ ಮುಂದಿನ ಮೂರು ತಿಂಗಳು ಮನ್ ಕಿ ಬಾತ್ ಕಾರ್ಯಕ್ರಮ ಸ್ಥಗಿತವಾಗಲಿದೆ ಎಂದು ಹೇಳಿದ್ದರು. ಮೂರನೇ ಬಾರಿ ಪ್ರಧಾನಪಟ್ಟ ಅಲಂಕರಿಸಿರುವ ಪ್ರಧಾನಿಗಳ ಮೊದಲ ಮನ್ ಕಿ ಬಾತ್ ಕಾರ್ಯಕ್ರಮ ಇದಾಗಿದೆ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕೇರಳದ ಪಾಲಕಾಡ್‌ನಲ್ಲಿ ಆದಿವಾಸಿ ಮಹಿಳೆಯರು ತಯಾರಿಸುವ ಛತ್ರಿಗಳ ಬಗ್ಗೆಯೂ ಮಾತನಾಡಿದರು. ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಆಟಗಾರರನ್ನು ಹುರಿದುಂಬಿಸಬೇಕು ಎಂದು ಭಾರತೀಯ ಆಟಗಾರರಿರಗೆ ಪ್ರಧಾನಿಗಳು ಶುಭಾಶಯಗಳನ್ನು ತಿಳಿಸಿದರು. ಇದೇ ವೇಳೆ ಲೋಕಸಭಾ ಚುನಾವಣೆಯನ್ನು ಶಾಂತಯುತವಾಗಿ ನಡೆಸಿಕೊಟ್ಟ ಎಲ್ಲಾ ಭಾರತೀಯರಿಗೂ ಧನ್ಯವಾದಗಳನ್ನು ತಿಳಿಸಿದರು. 65 ಕೋಟಿ ಜನರು ಮತ ಚಲಾಯಿಸಿದ ಜಗತ್ತಿನ ಯಾವುದೇ ದೇಶದಲ್ಲಿ ಇಷ್ಟು ದೊಡ್ಡ ಚುನಾವಣೆ ನಡೆದಿಲ್ಲ. ನಾನು ಚುನಾವಣಾ ಆಯೋಗ ಮತ್ತು ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಪ್ರತಿಯೊಬ್ಬರನ್ನು ಅಭಿನಂದಿಸುತ್ತೇನೆ ಎಂದರು.
3ನೇ ಅಕ್ಟೋಬರ್ 2014ರದು ಪ್ರಧಾನಿಗಳ ಮನ್ ಕಿ ಬಾತ್ ಕಾರ್ಯಕ್ರಮ ಪ್ರಸಾರವಾಗಿತ್ತು. ಇದುವರೆಗೂ 110 ಸಂಚಿಕೆಗಳು ಪ್ರಸಾರಗೊಂಡಿದ್ದು, ಇಂದು 111ನೇ ಎಪಿಸೋಡ್ ಟೆಲಿಕಾಸ್ಟ್ ಆಗಿದೆ. ಪ್ರತಿ ಸಂಚಿಕೆಯಲ್ಲಿಯೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಪರಿಚಯ ಮಾಡಿಸುತ್ತಾರೆ. ಇದರ ಜೊತೆಯಲ್ಲಿ ದೇಶದಲ್ಲಿ ನಡೆಯುತ್ತಿರುವ ರಾಜಕೀಯೇತರ ವಿಷಯಗಳ ಕುರಿತು ಸುದೀರ್ಘವಾಗಿ ಮಾತನಾಡುತ್ತಾರೆ.
ಕರ್ನಾಟಕ ರಾಜ್ಯದ ಮಂಡ್ಯದ ಜಲ ಭಗೀರಥ ಕಾಮೇಗೌಡರು, ಚಾಮರಾಜನಗರದಲ್ಲಿ ಅನುಪಯುಕ್ತ ಬಾಳೆ ದಿಂಡಿನಿಂದ ಕರಕುಶಲ ಸಾಮಾಗ್ರಿಗಳನ್ನು ತಯಾರಿಸುವ ವರ್ಷಾ ಬಗ್ಗೆಯೂ ಮಾತನಾಡಿದ್ದರು. ಅದೇ ರೀತಿ ಸಂಸ್ಕೃತ ಭಾಷೆ ಮಾತನಾಡುವ ಶಿವಮೊಗ್ಗ ಜಿಲ್ಲೆಯ ಮಥೂರ ಬಗ್ಗೆಯೂ ಹೆಮ್ಮೆಯಿಂದ ಪ್ರಧಾನಿಗಳು ಮಾತನಾಡಿದ್ದರು.
ಮನ್ ಕಿ ಬಾತ್ ಕಾರ್ಯಕ್ರಮ ದೇಶದ ಪ್ರಮುಖ 22 ಭಾಷೆ, 29 ಉಪಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಫ್ರೆಂಚ್, ಚೈನೀಸ್, ಇಂಡೋನೇಷಿಯನ್, ಟಿಬೆಟಿಯನ್, ಬರ್ಮೀಸ್, ಬಲೂಚಿ, ಅರೇಬಿಕ್, ಪಶ್ತು, ಪರ್ಷಿಯನ್ ಸೇರಿದಂತೆ 11 ವಿದೇಶಿ ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಆಲ್ ಇಂಡಿಯಾ ರೇಡಿಯೋದ 500 ಕ್ಕೂ ಹೆಚ್ಚು ಕೇಂದ್ರಗಳ ಮೂಲಕ ಪ್ರೇಕ್ಷಕರನ್ನು ತಲುಪುತ್ತದೆ.