ನವದೆಹಲಿ(ಜೂ.26) ಲೋಕಸಭಾ ಇತಿಹಾಸದಲ್ಲಿ 48 ವರ್ಷಗಳ ಬಳಿಕ ನಡೆದ ಸ್ಪೀಕರ್ ಮತದಾನದಲ್ಲಿ ಎನ್‌ಡಿಎ ಅಭ್ಯರ್ಥಿ ಒಂ ಬಿರ್ಲಾ ಆಯ್ಕೆಯಾಗಿದ್ದಾರೆ. ಧ್ವನಿ ಮತದ ಮೂಲಕ ಹೊಸ ಸ್ವೀಕರ್ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಓಮ್ ಬಿರ್ಲಾ ವಿರುದ್ಧ ಇಂಡಿಯಾ ಒಕ್ಕೂಟದ ಅಭ್ಯರ್ಥಿಯಾಗಿ ಕೆ ಸುರೇಶ್ ಸ್ಪರ್ಧಿಸಿದ್ದರು. ನೂತನ ಸ್ಪೀಕರ್ ಆಗಿ ಆಯ್ಕೆಯಾದ ಒಮ್ ಬಿರ್ಲಾಗೆ ಪ್ರಧಾನಿ ಮೋದಿ ಸೇರಿದಂತೆ ಎನ್‌ಡಿಎ ಒಕ್ಕೂಟ ನಾಯಕರು ಶುಭ ಕೋರಿದ್ದಾರೆ.
ಪ್ರಧಾನಿ ಮೋದಿ 2ನೇ ಅವಧಿಯಲ್ಲಿ ಲೋಕಸಭಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ ಓಂ ಬಿರ್ಲಾ ಇದೀಗ ಸತತ 2ನೇ ಬಾರಿಗೆ ಲೋಕಸಭಾ ಸ್ವೀಕರ್ ಆಗಿ ಆಯ್ಕೆಯಾಗಿದ್ದಾರೆ. ಸ್ಪೀಕರ್ ಹಾಗೂ ಡೆಪ್ಯೂಟಿ ಸ್ಪೀಕರ್ ವಿಚಾರದಲ್ಲಿ ಎನ್‌ಡಿಎ ಹಾಗೂ ವಿಪಕ್ಷಗಳಲ್ಲಿ ಒಮ್ಮತ ಮೂಡದ ಕಾರಣ ಚುನಾವಣೆ ಮೊರೆ ಹೋಗಲಾಗಿತ್ತು.
ಡೆಪ್ಯೂಟಿ ಸ್ಪೀಕರ್ ಹುದ್ದೆ ವಿಪಕ್ಷಗಳಿಗೆ ನೀಡಿದರೆ ಮಾತ್ರ, ಸ್ಪೀಕರ್ ಸ್ಥಾನಕ್ಕೆ ಒಂ ಬಿರ್ಲಾಗೆ ಬೆಂಬಲ ನೀಡುವುದಾಗಿ ಇಂಡಿಯಾ ಒಕ್ಕೂಟ ಹೇಳಿತ್ತು. ಡೆಪ್ಯೂಟಿ ಸ್ಪೀಕರ್ ಹುದ್ದೆ ವಿಪಕ್ಷಗಳಿಗೆ ನೀಡಲು ನಿರಾಕರಿಸಿದ ಎನ್‌ಡಿಎ, ಚುನಾವಣೆಗೆ ತಯಾರಿ ನಡೆಸಿತ್ತು. ಇದೀಗ ಒಂ ಬಿರ್ಲಾ 18ನೇ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.