ಬೆಂಗಳೂರು, ಜೂನ್ 26: ಇಂಧನ ಇಲಾಖೆಯಿಂದ ಇಂದು (ಜೂ.26) ಬೆಂಗಳೂರಲ್ಲಿ ರಾಷ್ಟ್ರೀಯ ವಿದ್ಯುತ್ ಸುರಕ್ಷಿತಾ ಸಪ್ತಾಹ-2024 ಕಾರ್ಯಕ್ರಮ ಆಯೋಜಿಸಲಾಗಿದೆ. ಜೂನ್ 26 ರಿಂದ ಜುಲೈ 02ರ ವರೆಗೆ ಈ ಸಪ್ತಾಹ ನಡೆಯಲಿದೆ. ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ವಿದ್ಯುತ್ ಸುರಕ್ಷಿತಾ ಸಪ್ತಾಹ ಕಾರ್ಯಕ್ರಮವನ್ನು ಇಂಧನ ಸಚಿವ ಕೆಜೆ ಜಾರ್ಜ್ ಉದ್ಘಾಟಿಸಿದರು. ಬಳಿಕ ಸಪ್ತಾಹ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಕಾಲ್ನಡಿಗೆ ಕೆಜೆ ಜಾರ್ಜ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡ್ಯ, ಅಪರ್ಣಾ ಪಾವಟೆ ಭಾಗಿಯಾಗಿದ್ದರು.
ಎಲೆಕ್ಟ್ರಾನಿಕ್ ವಾಹನಗಳಿಂದ ಆಗುತ್ತಿರುವ ಅವಘಡಗಳನ್ನು ತಪ್ಪಿಸುವ ಸಲುವಾಗಿ ಆಯೋಜಿಸಿರುವ ಸಪ್ತಾಹ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಮೆನೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿದಂತೆ ಹೇಗೆ ನೋಡಿಕೊಳ್ಳಬೇಕು, ಅಪಾಯದಿಂದ ಹೇಗೆ ದೂರವಿರಬೇಕು? ಸೇರಿದಂತೆ ಹಲವು ಸುರಕ್ಷತಾ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಗೃಹ ಬಳಕೆ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಸುರಕ್ಷತಾ ನಿಯಮಗಳು
- ಎಲ್ಲ ವಿದ್ಯುತ್ ಕಾಮಗಾರಿಗಳನ್ನು ಎಷ್ಟೇ ಚಿಕ್ಕದಿರಲಿ, ಪರಿಣಿತ ವ್ಯಕ್ತಿಗಳಿಂದಲೇ ನಿರ್ವಹಿಸಬೇಕು.
- ಭಾರತೀಯ ಗುಣಮಟ್ಟ ಸಂಸ್ಥೆಯ ಪ್ರಮಾಣೀಕೃತ ವಿದ್ಯುತ್ ಉಪಕರಣ, ಕೇಬಲ್, ವೈರ್ ಹಾಗೂ ಸುರಕ್ಷತಾ ಉಪಕರಣಗಳನ್ನು ಬಳಸಬೇಕು.
- ವಿದ್ಯುತ್ ಸ್ಥಾವರದಲ್ಲಿ ಪರಿಣಾಮಕಾರಿ ಭೂಸಂಪರ್ಕ ವ್ಯವಸ್ಥೆಯನ್ನು (ಅರ್ಥಿಂಗ್) ಕಲ್ಪಸಿ, ನಿರ್ವಹಿಸಬೇಕಾಗಿರುತ್ತದೆ.
- ಜೀವ ರಕ್ಷಕ ಆರ್‌ಸಿಡಿಗಳನ್ನು ಬಳಸಿ ವಿದ್ಯುತ್ ಸೋರಿಕೆಯಿಂದ ಉಂಟಾಗುವ ಅಪಾಯವನ್ನು ತಪ್ಪಿಸುವುದು.
- ಭಾರಿ ವಿದ್ಯುತ್ ಪರಿಕರಗಳಾದ ರೆಫ್ರಿಜರೇಟರ್, ಮಿಕ್ಸರ್, ಘೀಸರ್, ವಾಷಿಂಗ್ ಮಷಿನ್ ಮುಂತಾದವುಗಳಿಗೆ ಮೂರು ಪಿನ್ ಪ್ಲಗ್ ಸಾಕೆಟ್ಸ್‌ಗಳಿರುವ ಪ್ರತ್ಯೇಕ ಸ್ವಿಚ್ ನಿಯಂತ್ರಣದಿಂದಲೇ ವಿದ್ಯುತ್ ಸರಬರಾಜು ಕಲ್ಪಿಸಿ, ಮೂರನೇ ಪಿನ್‌ಗೆ ಭೂಸಂಪರ್ಕ ಕಲ್ಪಿಸಬೇಕಾಗಿರುತ್ತದೆ.
- ವಿದ್ಯುತ್ ಸ್ವಿಚ್ ಹಾಗೂ ಸಾಕೆಟ್‌ಗಳನ್ನು ಕೈಗೆ ಎಟುಕುವ ಎತ್ತರದಲ್ಲಿ ಮಕ್ಕಳಿಗೆ ಸಿಗದ ಹಾಗೆ ಅಳವಡಿಸಬೇಕು.
- ಒದ್ದೆಯಾದ ಕೈಗಳಿಂದ ವಿದ್ಯುತ್ ಸ್ವಿಚ್‌ಗಳನ್ನು ಮುಟ್ಟಬಾರದು.
- ವಿದ್ಯುತ್ ಪ್ಲಗ್ಅನ್ನು ಸಾಕೆಟ್‌ನಲ್ಲಿ ಅಳವಡಿಸುವ ಅಥವಾ ಅದರಿಂದ ತೆಗೆಯುವ ಮುಂಚಿತವಾಗಿ ಸ್ವಿಚ್ ಅನ್ನು ಆಫ್ ಮಾಡಿ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಬೇಕು.
- ಬಳಸದೇ ಇರುವ ಸಾಕೆಟ್‌ಗಳಿಗೆ ಡಮ್ಮಿ ಸುರಕ್ಷಾ ಮುಚ್ಚಳವನ್ನು ಅಳವಡಿಸಬೇಕು.
- ಒಡೆದುಹೋಗಿರುವ ಅಥವಾ ಕೃಷವಾಗಿರುವ ವಿದ್ಯುತ್ ಸ್ವಿಚ್ ಹಾಗೂ ಸಾಕೆಟ್‌ಗಳು ಕಂಡಬಂದ ಸಂದರ್ಭದಲ್ಲಿಯೇ ಹೊಸದರೊಂದಿಗೆ ಬದಲಾಯಿಸುವುದು.
- ನಿಯತಕಾಲಿಕವಾಗಿ ವಿದ್ಯುತ್ ಸ್ಥಾವರವನ್ನು ಪರಿಶೀಲಿನೆಗೆ ಒಳಪಡಿಸಿ ಸುಸ್ಥಿತಿಯಲ್ಲಿ ನಿರ್ವಹಿಸಬೇಕಾಗಿರುತ್ತದೆ.