ಹುಬ್ಬಳ್ಳಿ, ಜೂನ್.26: ಇತ್ತೀಚೆಗೆ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶಗಳು ಹೆಚ್ಚಾಗಿವೆ. ಎರಡು ದಿನದ ಹಿಂದೆಯಷ್ಟೇ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿತ್ತು. ಇದೀಗ ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕರಿಗೆ ಜೀವ ಬೆದರಿಕೆಯ ಇ-ಮೇಲ್ ಬಂದಿದೆ. ವಿಮಾನ ನಿಲ್ದಾಣ ನಿರ್ದೇಶಕ ರೂಪೇಶ್ ಕುಮಾರ್ಗೆ ವ್ಯಕ್ತಿಯೊಬ್ಬನಿಂದ ಇ-ಮೇಲ್ ಮೂಲಕ ಜೀವಬೆದರಿಕೆ ಸಂದೇಶ ಬಂದಿದೆ.
ಲಾಂಗ್ ಲೀವ್ ಪ್ಯಾಲೆಸ್ತೇನ್ ಎಂಬ ಹೆಸರಿನ ಮೇಲ್ ಐಡಿಯಿಂದ ನಿರ್ದೇಶಕರ ಕಚೇರಿಯ ಮೇಲ್ ಐಡಿಗೆ ಬೆದರಿಕೆ ಸಂದೇಶ ಬಂದಿದೆ. ನಾವು ನಿಮ್ಮನ್ನು ನಾಶ ಮಾಡುತ್ತೇವೆ. ನೀವು ಮಾಡಿದ ಎಲ್ಲ ಕೆಟ್ಟ ಕೆಲಸಗಳಿಗೆ ಉತ್ತರವಿಲ್ಲ ಎಂದು ಭಾವಿಸಿದ್ದೀರ. ಬೆಂಕಿಯಲ್ಲಿ ಎಸೆಯುತ್ತೇವೆ, ಉಸಿರುಗಟ್ಟಿ ಸಾಯುತ್ತೀರ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಇ-ಮೇಲ್ ಸಂದೇಶ ಬಂದ ತಕ್ಷಣವೇ ರೂಪೇಶ್ ಅವರು ಈ ವಿಚಾರವನ್ನು ಟರ್ಮಿನಲ್ ಉಸ್ತುವಾರಿ ಪ್ರತಾಪ್ ಅವರ ಗಮನಕ್ಕೆ ತಂದಿದ್ದಾರೆ. ನಂತರ ಸಿಎಎಸ್‌ಒ, ಐಬಿ, ಬಿಡಿಡಿಎಸ್ ಮತ್ತು ಬಾಂಬ್ ನಿಷ್ಕ್ರಿಯ ದಳಕ್ಕೆ ಮಾಹಿತಿ ರವಾನಿಸಿದ್ದು ವಾಯುಯಾನ ಭದ್ರತಾ ನಿಯಮದ ಪ್ರಕಾರ ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದಾರೆ. ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.