ಕಾರವಾರ: ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಆ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇಂತಹ ಘಟನೆ ಸಾರ್ವತ್ರಿಕವಾಗಿ ಖಂಡನೀಯ. ಅದರಲ್ಲೂ ಒಬ್ಬ ಮಹಿಳೆಯಾಗಿ ಇಂತಹ ಬರ್ಬರ ಘಟನೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಇಂತಹ ಸಮಾಜಘಾತುಕ ಶಕ್ತಿಗಳು ಕ್ರಿಯಾಶೀಲವಾಗಿವೆ. ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣ, ಮೃದು ಧೋರಣೆಯೆ ಇಂತಹ ಅಮಾನುಷ ಕೃತ್ಯಗಳಿಗೆ ಕಾರಣವಾಗಿದೆ.
ಹಿಂದುಗಡೆ ಹಿಂದೂಗಳನ್ನು ದಮನ ಮಾಡುತ್ತ ಕೇಸರಿಪೇಟತೊಟ್ಟು ಫೊಟೊಕ್ಕೆ ಫೋಸ್ ನೀಡಿ ಕೇವಲ ಹಿಂದುಗಳ ಮತಕ್ಕಾಗಿ ನಾಟಕವಾಡುವ ಕಾಂಗ್ರೆಸ್ಸಿಗರು ಇದಕ್ಕೆಲ್ಲ ಉತ್ತರಿಸಬೇಕು.
ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡು ಕಾನೂನಿನ ಎದುರು ಎಲ್ಲರೂ ಸಮಾನರು ಎನ್ನುವ ಸಂದೇಶವನ್ನು ರವಾನಿಸಬೇಕು. ಓಲೈಕೆ ರಾಜಕಾರಣವನ್ನು ಕೈಬಿಡಬೇಕು ಎಂದು ರೂಪಾಲಿ ಎಸ್. ನಾಯ್ಕ ಅವರು ಆಗ್ರಹಿಸಿದ್ದಾರೆ.