ಭಟ್ಕಳ, ಏಪ್ರಿಲ್ 20 : ಅರಬ್ಬೀ ಸಮುದ್ರದಲ್ಲಿ ಭಾರಿ ಗಾಳಿ ಮಳೆಯಿಂದಾಗಿ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದೆ. ಬೋಟ್‌ನಲ್ಲಿದ್ದ 4 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮಾವಿನಕುರ್ವೆ ಮೀನುಗಾರಿಕಾ ಬಂದರು ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಹಾದೇವ ಖಾರ್ವಿ ಎಂಬವರ ಮಾಲಕತ್ವದ ಓಂ ಮಹಾಗಣಪತಿ ಹೆಸರಿನ ಬೋಟ್ ಮುಳುಗಡೆಯಾಗಿದೆ.
ಇಂದು ಬೆಳಿಗ್ಗೆ 5 ಗಂಟೆಯ ವೇಳೆಗೆ 4 ಮಂದಿ ಮೀನುಗಾರರು ಈ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಅರಬ್ಬೀ ಸಮದ್ರದಲ್ಲಿ ಕಾಣಿಸಿಕೊಂಡ ಭಾರೀ ಗಾಳಿ ಮಳೆಗೆ ಬೋಟ್ ಪಲ್ಟಿಯಾಗಿದೆ. ಸ್ಥಳದಲ್ಲಿದ್ದ ಇನ್ನೊಂದು ಬೋಟ್‌ನವರಿಂದ ಮೀನುಗಾರರ ರಕ್ಷಣೆ ಮಾಡಲಾಗಿದೆ. ಬೋಟ್ ದುರ್ಘಟನೆಯಿಂದ ಮಾಲೀಕರಿಗೆ ಲಕ್ಷಾಂತರ ರೂಪಾಯಿ ಹಾನಿಯಾಗಿದೆ.
ಇಂದು ಉತ್ತರಕನ್ನಡ ಜಿಲ್ಲೆಯ ಕರಾವಳಿಯಾದ್ಯಂತ ಭಾರೀ ಗಾಳಿ ಮಳೆ ಪ್ರಾರಂಭಗೊಂಡಿದೆ. ಸಮುದ್ರಕ್ಕೆ ತೆರಳುವವರಿಗೆ ಜಿಲ್ಲಾಡಳಿತ ಈ ಕುರಿತು ಅಲರ್ಟ್ ನೀಡಿದೆ.