ಸೈಂಟ್ ಲೂಸಿಯಾ: ಮಂಗಳವಾರ ನಡೆದ ಟಿ20 ವಿಶ್ವಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಅಫಘಾನಿಸ್ತಾನ ವಿರುದ್ಧ 104 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್ ನಡೆಸಿದ ವಿಂಡೀಸ್ನ ಎಡಗೈ ಬ್ಯಾಟರ್ ನಿಕೋಲಸ್ ಪೂರನ್ ಒಂದೇ ಓವರ್ನಲ್ಲಿ 36 ರನ್ಬಾರಿಸುವ ಮೂಲಕ ಯುವರಾಜ್ ಸಿಂಗ್ ಮತ್ತು ಕೈರನ್ ಪೊಲಾರ್ಡ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಪೂರನ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು. ಅಜ್ಮತುಲ್ಲಾ ಒಮರ್ಜಾಯ್ ಅವರ ದ್ವಿತೀಯ ಓವರ್ನಲ್ಲಿ ಸಿಡಿದು ನಿಂತ ಪೂರನ್ ಮೂರು ಸಿಕ್ಸರ್ ಮತ್ತು ಮೂರು ಬೌಂಡರಿ ಬಾರಿಸಿ ಒಟ್ಟು 36 ರನ್ ಕಲೆಹಾಕಿದರು. 2 ನೋಬಾಲ್ ಮತ್ತು ಒಂದು ವೈಡ್ 4 ಕೂಡ ಈ ಓವರ್ನಲ್ಲಿ ದಾಖಲಾಯಿತು. 36 ರನ್ ಕಲೆಹಾಕುವ ಮೂಲಕ ಪೂರನ್ ಅವರು ಒಂದೇ ಓವರ್ನಲ್ಲಿ 36 ರನ್ ಬಾರಿಸಿದ ಯುವರಾಜ್ ಮತ್ತು ಕೈರನ್ ಪೊಲಾರ್ಡ್ ಅವರನ್ನೊಳಗೊಂಡ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡರು.
ಯುವರಾಜ್ ಸಿಂಗ್ ಅವರು 2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸುವರ್ಟ್ ಬ್ರಾಡ್ ಅವರ ಓವರ್ನಲ್ಲಿ ಸತತ 6 ಸಿಕ್ಸರ್ ಬಾರಿಸುವ ಮೂಲಕ ಈ ಸಾಧನೆ ಮಾಡಿದ್ದರು. ವಿಂಡೀಸ್ನ ಆಟಗಾರನೇ ಆಗಿರುವ ಕೈರನ್ ಪೊಲಾರ್ಡ್ 2021ರಲ್ಲಿ ಶ್ರೀಲಂಕಾದ ಅಕಿಲ್ ಧನಂಜಯ ಅವರ ಓವರ್ನಲ್ಲಿ 36 ರನ್ ಬಾರಿಸಿದ್ದರು.
ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಪೂರನ್ 53 ಎಸೆತಗಳಿಂದ 89 ರನ್ ಬಾರಿಸಿ ರನೌಟ್ ಆಗುವ ಮೂಲಕ ಕೇವಲ 2 ರನ್ ಅಂತರದಿಂದ ಶತಕ ವಂಚಿತರಾದರು. ಅವರ ಈ ಬ್ಯಾಟಿಂಗ್ ಇನಿಂಗ್ಸ್ನಲ್ಲಿ ಬರೋಬ್ಬರಿ 8 ಸಿಕ್ಸರ್ ಮತ್ತು 6 ಬೌಂಡರಿ ಸಿಡಿಯಿತು. ಸಾರಸ್ಯವೆಂದರೆ 36 ರನ್ ಚಚ್ಚಿಸಿಕೊಂಡ ಒಮರ್ಜಾಯ್ ಅವರೇ ಪೂರನ್ ಅವರನ್ನು ರನೌಟ್ ಮಾಡಿದ್ದು.
ಪಂದ್ಯ ಗೆದ್ದ ವಿಂಡೀಸ್
ಈಗಾಗಲೇ ಸೂಪರ್-8 ಹಂತಕ್ಕೇರಿರುವ ವಿಂಡೀಸ್ ಮತ್ತು ಅಫಘಾನಿಸ್ತಾನಕ್ಕೆ ಈ ಪಂದ್ಯ ಕೇವಲ ಅಭ್ಯಾಸಕ್ಕೆ ಸೀಮಿತವಾದ ಪಂದ್ಯವಾಗಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್ಗಳಲ್ಲಿ ಪ್ರಚಂಡ ಬ್ಯಾಟಿಂಗ್ ನಡೆಸಿ 5 ವಿಕೆಟ್ಗೆ 218 ರನ್ ಬಾರಿಸಿತು. ಈ ಬೃಹತ್ ಮೊತ್ತವನ್ನು ಕಂಡು ದಂಗಾದ ಅಫಘಾನಿಸ್ತಾನ ಆರಂಭದಿಂದಲೇ ವಿಕೆಟ್ ಕಳೆದುಕೊಂಡು 114 ರನ್ಗೆ ಸರ್ವಪತನ ಕಂಡು ಹೀನಾಯ ಸೋಲು ಕಂಡಿತು. ವಿಂಡೀಸ್ ಪರ ಒಬೆಡ್ ಮೆಕಾಯ್(3), ಅಕಿಲ್ ಹೊಸೈನ್ ಮತ್ತು ಗುಡಾಕೇಶ್ ಮೋತಿ ತಲಾ 2 ವಿಕೆಟ್ ಕಿತ್ತರು.