ಹೊನ್ನಾವರ, ಜೂ. 16 : ತಾಲೂಕಿನ ಆಲೋಚನಾ ವೇದಿಕೆಯ ವತಿಯಿಂದ ನೀಡಲಾಗುವ ಸುಮನಶ್ರೀ ಪ್ರಶಸ್ತಿಗೆ ಈ ಬಾರಿ ವಿವಿಧ ಕ್ಷೇತ್ರದ ಐವರು ಸಾಧಕರು ಆಯ್ಕೆಯಾಗಿದ್ದು, ಜೂ 24 ರಂದು ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಂಘಟನೆಯ ಅಧ್ಯಕ್ಷರಾದ ಡಾ. ಶ್ರೀಪಾದ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಈ ಬಾರಿ ಐವರು ಸಾಧಕರಿಗೆ ಜೂನ್ 24 ರಂದು ಸಂಜೆ 4 ಗಂಟೆಗೆ ಎಸ್.ಎಸ್.ಕೆ.ಪಿ. ಪಿಯು ಕಾಲೇಜಿನ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿ ಸುಮನಶ್ರೀ ಪ್ರಶಸ್ತ್ರಿಗೆ ಆಯ್ಕೆಯಾದ ಅರೇಅಂಗಡಿಯವರಾದ ನೀಲಕಂಠ ನಾಯಕ ( 86) ಇವರು ವೃತ್ತಿಯಲ್ಲಿ ವಾಹನ ಚಾಲಕರಾಗಿದ್ದು, ಕಳೆದ 60 ವರ್ಷದಿಂದ ತಮ್ಮ ಕಾರು ಚಾಲನೆಯ ಮೂಲಕ ಜೀವನ ನಡೆಸುತ್ತಿದ್ದು ಸಮಾಜಕ್ಕೆ ತನ್ನದೇ ಆದ ಸೇವೆ ನೀಡುತ್ತಿದ್ದಾರೆ.
ಇನೊರ್ವರಾದ ಕೆರಕೋಣ ಭಟ್ರಗದ್ದೆ ಮೂಲದವರಾದ ಗಣಪಯ್ಯ ಮಂಜಯ್ಯ ಶೆಟ್ಟಿ (95 ) ಇವರು ಪ್ರಸುತ್ತ ಪಟ್ಟಣದ ವಡಗೇರಿಯಲ್ಲಿ ವಾಸ್ತವ್ಯ ಮಾಡುತ್ತಿದ್ದು, ಆದರ್ಶ ಕೃಷಿಕರಾಗಿದ್ದಾರೆ. ತಮ್ಮ ಇಳಿ ವಯಸ್ಸಿನಲ್ಲಿಯೂ ಕೃಷಿಯ ಕುರಿತು ಆಸಕ್ತಿ ಹೊಂದಿರುದಲ್ಲದೇ, ಯುವಕರಿಗೆ ಕೃಷಿ ಬಗ್ಗೆ ಮಾಹಿತಿ ನೀಡುತ್ತಾ ಬಂದಿದ್ದಾರೆ.
ಕಡತೋಕಾದ ಚೌಕ ಗ್ರಾಮದ ಶ್ರೀಪಾದ ಭಟ್ ಸಂಗೀತ ಕಲಾವಿದರಾಗಿದ್ದು, ಗೀತರಾಮಾಯಣದ ಹೆಸರಾಂತ ಗಾಯಕರಾಗಿದ್ದಾರೆ. ಹೊಸಾಕುಳಿ ಗ್ರಾಮದ ಮುಡಾರೆ ನಿವಾಸಿ ನಾಗೇಂದ್ರ ಸಣ್ಕೂಸ್ ಗೌಡ ಇವರು ವೃತ್ತಿಯಲ್ಲಿ ಗಾರೆ ಕೆಲಸ ಮಾಡುತ್ತಾ ಬಂದಿದ್ದಾರೆ. ಇನ್ನು ತೊಳಸಾಣಿಯ ದೇವು ಟಾಕು ಮರಾಠಿ (75) ಕುಂಬ್ರಿ ಮರಾಠಿ ಸಮುದಾಯವರಾದ ಇವರು, ಸಮಾಜದ ಕೋಲಕಾರರಾಗಿರುವುದಲ್ಲದರೆ, ಕೋಲಾಟ ಕಲಾವಿದರಾಗಿಯು ಪ್ರಸಿದ್ದರು. ಈ ಎಲ್ಲಾ ಸಾಧಕರಿಗೆ ಈ ಬಾರಿ ಸುಮನಶ್ರೀ ಹೆಸರಿನ ಪ್ರಶಸ್ತಿ ಘೋಷಣೆಯಾಗಿದ್ದು, ಪ್ರಶಸ್ತಿ ಪತ್ರ, ತಲಾ 5000 ನಗದು ನೀಡಿ ಗೌರವಿಸಲಾಗುತ್ತದೆ.
ಶ್ರೀ ಕರಿಕಾನ ಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ವೇ. ಮೂ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಾಷ್ಟ್ರಪ್ರಶಸ್ತಿ ಪುರಸ್ಕ್ರತ ಶಿಕ್ಷಕರು,ಶಿಕ್ಷಣ ತಜ್ಞರಾದ ಸತ್ಯಾನಂದ ಜೆ. ಕೈರನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದರೆ. ಪ್ರಾಚಾರ್ಯ ವಿ.ಎನ್.ಭಟ್ , ಮುಖ್ಯಧ್ಯಾಪಕ ಎಲ್.ಎಂ.ಹೆಗಡೆ,ಕರ್ನಾಟಕ ಸಂಸ್ಕ್ರತ ಪರಿಷತ್ ಅಧ್ಯಕ್ಷ ಮಂಜುನಾಥ ಗಾವಂಕರ್ ಬರ್ಗಿ ಉಪಸ್ಥಿತರಿರಲಿದ್ದಾರೆ. ಮಯೂರ ಹೆಗಡೆ ಹರಿಕೇರಿ ಇವರಿಂದ ಚಂಡೆವಾದನ ನಡೆಯಲಿದೆ. ಸಾರ್ವಜನಿಕರು ಆಗಮಿಸಿ ಪೊತ್ಸಾಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.