ಜೂನ್ 14 ರಂದು ನಡೆದ ಟಿ20 ವಿಶ್ವಕಪ್‌ನ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನೇಪಾಳ ತಂಡ ಕೇವಲ ಒಂದು ರನ್‌ನಿಂದ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದಲ್ಲಿ ನೇಪಾಳ ತಂಡ ಸೋತರೂ ತಮ್ಮ ಆಟದಿಂದ ಎಲ್ಲರ ಮನಗೆದ್ದಿತು. ಆಫ್ರಿಕಾದಂತಹ ಬಲಿಷ್ಠ ಬೌಲಿಂಗ್ ಎದುರು ನೇಪಾಳ ತಂಡ ಗೆಲುವಿಗಾಗಿ ನೀಡಿದ ಹೋರಾಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮೊದಲು ಆಫ್ರಿಕಾ ತಂಡವನ್ನು ಕೇವಲ 115 ರನ್ಗಳಿಗೆ ಕಟ್ಟಿಹಾಕಿದ್ದ ನೇಪಾಳ ತಂಡ, ಕೊನೆಯ ಎಸೆತದವರೆಗೂ ಗೆಲುವಿಗಾಗಿ ಹೋರಾಡಿ ವಿರೋಚಿತ ಸೋಲು ಕಂಡಿತು. ಹೀಗಾಗಿ ನೇಪಾಳ ತಂಡದ ಹೋರಾಟಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಸ್ವತಃ ದಕ್ಷಿಣ ಅಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್ (Dale Steyn) ಕೂಡ ನೇಪಾಳ ವಿರುದ್ಧ ನಮ್ಮ ತಂಡ ಸೋಲಬೇಕಿತ್ತು ಎಂಬ ಹೇಳಿಕೆ ನೀಡಿದ್ದಾರೆ.
ನೇಪಾಳ ಗೆಲ್ಲಬೇಕಿತ್ತು ಎಂದ ಸ್ಟೇನ್
ಈ ಪಂದ್ಯದ ಬಗ್ಗೆ ಮಾತನಾಡಿದ ದಕ್ಷಿಣ ಆಫ್ರಿಕಾದ ಮಾಜಿ ಬೌಲರ್ ಸ್ಟೇನ್, ‘ಈ ಪಂದ್ಯವನ್ನು ವೀಕ್ಷಿಸಲು ಅದ್ಭುತವಾಗಿತ್ತು. ನನ್ನ ಪ್ರಕಾರ, ಇದುವರೆಗಿನ ಟೂರ್ನಿಯ ಅತ್ಯುತ್ತಮ ಪಂದ್ಯವಾಗಿತ್ತು. ನಿಜ ಹೇಳಬೇಕೆಂದರೆ, ನಾನು ಯಾವಾಗಲೂ ಅಂಡರ್‌ಡಾಗ್ ತಂಡಗಳ ಅಭಿಮಾನಿಯಾಗಿದ್ದೇನೆ. ಈ ಕಾರಣಕ್ಕಾಗಿ, ದಕ್ಷಿಣ ಆಫ್ರಿಕಾದವನಾಗಿದ್ದರೂ, ನಾನು ನೇಪಾಳದ ಗೆಲುವನ್ನು ಬಯಸಿದ್ದೆ.
ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ನೇಪಾಳ ಸೋಲಿಸಿದ್ದರೆ, ಈ ಬಾರಿಯ ವಿಶ್ವಕಪ್‌ನ ಅವಿಸ್ಮರಣೀಯ ಕ್ಷಣವಾಗುತ್ತಿತ್ತು. ಸ್ಟ್ಯಾಂಡ್‌ನಲ್ಲಿ ಅಭಿಮಾನಿಗಳು ಅಳುವುದನ್ನು ನಾನು ನೋಡಿದ್ದೇನೆ. ಇದು ಜನರಿಗೆ ಕ್ರಿಕೆಟ್ ಎಂದರೇನು ಎಂಬುದನ್ನು ತೋರಿಸುತ್ತದೆ. ಅವರು ಯಾವಾಗಲೂ 200 ರನ್ ಸ್ಕೋರ್ ನೋಡಲು ಬರುವುದಿಲ್ಲ. ಇದು ನಿಜವಾದ ಕ್ರಿಕೆಟ್. ಜನರು ಈ ಬಗ್ಗೆ ಮಾತನಾಡಬೇಕು ಎಂದು ನಾನು ಭಾವಿಸುತ್ತೇನೆ. ಒಂದು ವೇಳೆ ನೇಪಾಳ ಈ ಪಂದ್ಯವನ್ನು ಗೆದ್ದಿದ್ದರೆ ಅದು ಟೂರ್ನಿಯ ಅವಿಸ್ಮರಣೀಯ ಕ್ಷಣವಾಗುತ್ತಿತ್ತು. ಅವರು ಅದ್ಭುತ ಪ್ರದರ್ಶನ ನೀಡಿದ್ದು, ಈ ಗೆಲುವಿಗೆ ಅರ್ಹರಾಗಿದ್ದರು ಎಂದಿದ್ದಾರೆ.
ಕೊನೆಯಲ್ಲಿ ಎಡವಿದ ನೇಪಾಳ
ದಕ್ಷಿಣ ಆಫ್ರಿಕಾ ವಿರುದ್ಧ ನೇಪಾಳದ ಗೆಲುವಿಗೆ ಕೊನೆಯ ಓವರ್‌ನಲ್ಲಿ 8 ರನ್‌ಗಳ ಅಗತ್ಯವಿತ್ತು. ಮಾರ್ಕ್ರಾಮ್ ಕೊನೆಯ ಓವರ್‌ನ ಜವಾಬ್ದಾರಿಯನ್ನು ವೇಗದ ಬೌಲರ್ ಒಟ್ನೀಲ್ ಬಾರ್ಟ್‌ಮನ್‌ಗೆ ವಹಿಸಿದ್ದರು. ಗುಲ್ಶನ್ ಝಾ ಮೊದಲ ಎರಡು ಎಸೆತಗಳಲ್ಲಿ ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ. ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ನೇಪಾಳವನ್ನು ಸ್ಕೋರ್ ಹತ್ತಿರಕ್ಕೆ ಕೊಂಡೊಯ್ದರು. ನಾಲ್ಕನೇ ಎಸೆತದಲ್ಲಿ ಎರಡು ರನ್ ಕದಿಯುವ ಮೂಲಕ ನೇಪಾಳವನ್ನು ಗೆಲುವಿನ ಸಮೀಪಕ್ಕೆ ತಂದರು. ಐದನೇ ಎಸೆತದಲ್ಲಿ ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ. ಗೆಲುವಿಗೆ ಕೊನೆಯ ಎಸೆತದಲ್ಲಿ ಎರಡು ರನ್‌ಗಳ ಅಗತ್ಯವಿತ್ತು. ಆದರೆ ಕ್ಲಾಸೆನ್, ಗುಲ್ಶನ್ ಝಾ ಅವರನ್ನು ರನ್ ಔಟ್ ಮಾಡಿ ದಕ್ಷಿಣ ಆಫ್ರಿಕಾಕ್ಕೆ ರೋಚಕ ಜಯ ತಂದುಕೊಟ್ಟರು.