ಸುಹಾಸ್ ಗೆ ‘ಅಸಾಧಾರಣ ಪ್ರತಿಭಾ ಪ್ರಶಸ್ತಿ’

ಸಿದ್ದಾಪುರ: ತಾಲೂಕಿನ ಕೋಲಸಿರ್ಸಿಯ ಸುಹಾಸ್ ನಾಗರಾಜ ನಾಯ್ಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ 2020-21 ನೇ ಸಾಲಿನ ಅಸಾಧಾರಣ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾನೆ. ಆ.15 ರಂದು ನಡೆಯುವ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಪತ್ರವನ್ನು ನೀಡಿ ಸನ್ಮಾನಿಸಲಾಗುತ್ತಿದೆ.

ಪಟ್ಟಣದ ಪ್ರಶಾಂತಿ ಪ್ರೌಢಶಾಲೆಯ 8 ನೇ ತರಗತಿಯ ವಿದ್ಯಾರ್ಥಿಯಾಗಿರುವ ಸುಹಾಸ್ ನಾಯ್ಕ ಸೃಜನಾತ್ಮಕ ಕಲೆಗಳಾದ ಚಿತ್ರಕಲೆ, ಜೇಡಿಮಣ್ಣಿನ ಕಲೆ, ಕರಕುಶಲ ಕಲಾಕೃತಿಗಳ ರಚನೆಯಲ್ಲಿ ಬಾಲ್ಯದಲ್ಲಿಯೇ ಆಸಕ್ತಿಯನ್ನು
ಬೆಳೆಸಿಕೊಂಡಿದ್ದಾನೆ. ರಾಜ್ಯಮಟ್ಟದ ಕಲಾಭೂಷಣ ಪುರಸ್ಕಾರ, ಕಲಾಶ್ರೀ ಪ್ರಶಸ್ತಿಯನ್ನು
ಪಡೆದುಕೊಂಡಿದ್ದಾನೆ.

2 ನೇ ತರಗತಿಯಲ್ಲಿರುವಾಗ ಪ್ರತಿಭಾ ಕಾರಂಜಿ ಸ್ಪರ್ಧೆಯ ಚಿತ್ರಕಲೆಯಲ್ಲಿ ಆಯ್ಕೆಯಾಗುವ ಮೂಲಕ ತನ್ನಲ್ಲಿಯ ಕಲಾಶಕ್ತಿಯನ್ನು ಹೆಚ್ಚಿಸಿಕೊಂಡಿದ್ದಾನೆ. ನಂತರದಲ್ಲಿ ನಿರಂತರವಾಗಿ ತಾಲೂಕು ಹಾಗೂ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಭಾಗವಹಿಸಿದ್ದ ಎಲ್ಲಾ ಚಿತ್ರಕಲಾ ಸ್ಪರ್ಧೆಗಳಲ್ಲಿಯೂ ಬಹುಮಾನಗಳನ್ನು ಪಡೆದುಕೊಂಡಿರುವುದು ಸುಹಾಸ್ ಸಾಧನೆಗೆ ಹಿಡಿದ ಕನ್ನಡಿಯಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಜಿಲ್ಲಾಮಟ್ಟದಲ್ಲಿ ನಡೆದ ‘ಕಲಾಶ್ರೀ’ ಆಯ್ಕೆ ಶಿಬಿರದಲ್ಲಿ ಪ್ರೌಢಶಾಲಾ
ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ ರಾಜ್ಯಮಟ್ಟದ ಕಲಾಶ್ರೀ ಸ್ಪರ್ಧೆಗೆ ಆಯ್ಕೆಯಾಗಿರುವುದು ಬಹುದೊಡ್ಡ ಸಾಧನೆಯಾಗಿದೆ. ಈ ಹಿಂದೆ ಶಾಂತಿ ಮತ್ತು ಮಾನವೀಯತೆ ರಾಷ್ಟ್ರೀಯ ಅಭಿಯಾನ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದ. ಅಂತರಾಷ್ಟ್ರೀಯ ಚಿಂತನ ಚಿತ್ರಕಲಾ ಸ್ಪರ್ಧೆಯಲ್ಲಿ ರಾಷ್ಟಮಟ್ಟದಲ್ಲಿ ಮೊದಲನೇ ರ‍್ಯಾಂಕ್ ಪಡೆದಿರುವುದು ಅಭಿಮಾನದ ಸಂಗತಿ. ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಪೆಢರೇಶನ್ ನವದೆಹಲಿ ನಡೆಸಿದ ಬೆಳಗಾಂವ ವಿಭಾಗಮಟ್ಟದ ಸ್ಪರ್ಧೆಯಲ್ಲಿಯೂ ಆಯ್ಕೆಯಾಗಿದ್ದಾನೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಏರ್ಪಡಿಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಫಲಿತಾಂಶದ ನಿರೀಕ್ಷೆಯಲ್ಲಿದ್ದಾನೆ.

ಚಿತ್ರಕಲೆಯಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿರುವ ಈತ ರಾಷ್ಟ್ರ ನಾಯಕರುಗಳ ಹಾಗೂ ಸ್ನೇಹಿತರು, ಬಂಧುಗಳ ಜನ್ಮದಿನದಂದು ಅವರ ಚಿತ್ರವನ್ನು ಬರೆದು ಶುಭಹಾರೈಸುವ ಪರಿಪಾಠ ಬೆಳೆಸಿಕೊಂಡಿದ್ದಾನೆ. ಸುಹಾಸ್ ಸಾಧನೆಗೆ ಶಾಲೆಯ ಶಿಕ್ಷಕರು ಹಾಗೂ ಸಹಪಾಠಿಗಳು ಶುಭ ಹಾರೈಸಿದ್ದಾರೆ.