ಅಂಕೋಲಾದ ಬೋಳೆ ಶಾಲೆಯಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ವೃಕ್ಷಾರೋಪಣ ಕಾರ್ಯಕ್ರಮ

ಅಂಕೋಲಾ ಜೂನ್‌ 07: ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಳೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಪರಿಸರ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

ವೃಕ್ಷಾರೋಪಣ ನೆರವೇರಿಸಿ ಮಾತನಾಡಿದ ವಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ನಾಯಕ, ಮಾನವ ಜೀವಿಗೆ ಪರಿಸರ ಅತ್ಯಮೂಲ್ಯ ಕೊಡುಗೆಯಾಗಿದೆ. ಪರಿಸರ ಉಳಿದರೆ ಮಾತ್ರ ಜೀವ ಸಂಕುಲ ಉಳಿಯುತ್ತದೆ. ಅರಣ್ಯವನ್ನು ಬೆಳಸಿ ಉಳಿಸುವ ಅಗತ್ಯತೆ ಹಾಗೂ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ನಾವೆಲ್ಲರೂ ಜಾಗೃತರಾಗಿ ಗಿಡ ಮರಗಳನ್ನು ನೆಡೋಣ ಎಂದು ಹೇಳಿದ್ರು…

ವಂದಿಗೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಪುಷ್ಪಲತಾ ಆರ್ ನಾಯಕ ಮಾತನಾಡಿ, ಗಿಡಮರಗಳಿಂದ ನಮಗೆ ಹೇರಳವಾದ ಆಮ್ಲಜನಕ ದೊರೆಯುತ್ತದೆ. ನಮ್ಮ ಸುತ್ತಲಿನ ಖಾಲಿ ಜಾಗದಲ್ಲಿ ಗಿಡಗಳನ್ನು ನೆಡಬೇಕು. ಮಕ್ಕಳಲ್ಲಿ ಪರಿಸರ ರಕ್ಷಣೆಯ ಜಾಗೃತಿಯನ್ನು ಚಿಕ್ಕವಯಸ್ಸಿನಲ್ಲಿಯೇ ಮಾಡಿಕೊಡಬೇಕು. ಈ ಶಾಲೆಯಲ್ಲಿ ಇದಕ್ಕೆ ಪೂರಕವಾದ ವಾತಾವರಣ ಕಂಡು ಬರುತ್ತಿದೆ ಎಂದರು.

ಗ್ರಾಮ ಪಂಚಾಯತಿ ಅಭಿವೃದ್ಧಿ ಗಿರೀಶ ನಾಯಕ ಮಾತನಾಡಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆ ಬೋಳೆಯಲ್ಲಿ ಪ್ರತಿ ವರ್ಷವೂ ಸಹ ವೃಕ್ಷಾ ರೋಪಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ. ನೆಟ್ಟ ಗಿಡಗಳನ್ನು ಅತ್ಯಂತ ಜೋಪಾನವಾಗಿ ಶಾಲೆಯವರು ಸಂರಕ್ಷಣೆ ಮಾಡುತ್ತಿದ್ದಾರೆ ಎಂದರು.

ಈ ವೇಳೆ ಉಪವಲಯ ಅರಣ್ಯಾಧಿಕಾರಿ ಮಹೇಶ್ ಮೆಂಡಿಗೇರಿ, ಗ್ರಾ.ಪಂ ಸದಸ್ಯೆ ಕುಸುಮ ಆಗೇರ, ಎಸ್‌ಡಿಎಂಸಿ ಅಧ್ಯಕ್ಷೆ ಶ್ವೇತಾ ಪ್ರಶಾಂತ ಆಗೇರ, ಬೀಟ್ ಫಾರೆಸ್ಟರ್ ಲಿಂಗಣ್ಣ, ಅರಣ್ಯ ಇಲಾಖೆ ಸಿಬ್ಬಂದಿಗಳಾದ ಗೋಣಿ ಗೌಡ, ಸುಧಾಕರ್, ಮಹಿ, ಚೇತನ್ ಅಡುಗೆ ಸಿಬ್ಬಂದಿ ಸುಮನಾ ನಾಗೇಶ ನಾಯ್ಕ,ಜಯಂತ ನಾಯ್ಕ ಮುಂತಾದವರು ಉಪಸ್ಥಿತರಿದ್ದರು..