ಪ್ರಧಾನಿ ಮೋದಿಯನ್ನು 18ನೇ ಲೋಕಸಭೆಯ ನಾಯಕನನ್ನಾಗಿ ಆಯ್ಕೆ ಮಾಡಿದ ಎನ್​ಡಿಎ ಸಂಸದರು

ಪ್ರಧಾನಿ ನರೇಂದ್ರ ಮೋದಿಯವರನ್ನು 18ನೇ ಲೋಕಸಭೆಯ ನಾಯಕನ್ನಾಗಿ ಎನ್​ಡಿಎ ಸಂಸದರು ಆಯ್ಕೆ ಮಾಡಿದ್ದಾರೆ. ಈ ಮೊದಲು ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎನ್‌ಡಿಎ ನಾಯಕರು ಔಪಚಾರಿಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೈತ್ರಿಕೂಟದ ನಾಯಕರನ್ನಾಗಿ ಆಯ್ಕೆ ಮಾಡಿದ್ದರು. ಇಂದು ಅಧಿಕೃತವಾಗಿ ಎನ್​ಡಿಎಯ ಎಲ್ಲಾ ಸಂಸದರು ಮೋದಿಯನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ.

ಇನ್ನೂ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮನವಿ ಮಾಡಲಿದ್ದಾರೆ ಅದಾದ ಬಳಿಕ ಮುರ್ಮು ಅವರು ಪ್ರಮಾಣವಚನ ಸ್ವೀಕರಿಸಲು ಒಪ್ಪಿಗೆ ನೀಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಬಾರಿ ಆ ಹುದ್ದೆಯನ್ನು ಅಲಂಕರಿಸಲು ವೇದಿಕೆ ಸಿದ್ಧವಾಗಿದೆ. ಬಿಜೆಪಿ ನೇತೃತ್ವದ ಎನ್ ಡಿಎ ಒಕ್ಕೂಟ ಸರ್ಕಾರ ರಚಿಸುವ ಪ್ರಸ್ತಾಪವನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಲು ಅಣಿಯಾಗಿದ್ದು, ಮೋದಿ ಅವರು ಮೈತ್ರಿಕೂಟ ಸದಸ್ಯ ಪಕ್ಷಗಳ ಮುಖಂಡರ ಜೊತೆಗೆ ಚರ್ಚೆ ನಡೆಸಿದ್ದಾರೆ.

ಟಿಡಿಪಿ, ಜೆಡಿಯು, ಶಿಂಧೆ ನೇತೃತ್ವದ ಶಿವಸೇನಾ ಮತ್ತು ಎಲ್‌ಜೆಪಿ (ರಾಮ್ ವಿಲಾಸ್) ಕ್ರಮವಾಗಿ 16, 12, 7 ಮತ್ತು 5 ಸ್ಥಾನಗಳನ್ನು ಗೆದ್ದಿದ್ದು ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಬಿಜೆಪಿ ನಾಯಕರಾದ ಅಮಿತ್​ ಶಾ, ರಾಜನಾಥ್ ಸಿಂಗ್,

ಪಲ್ಹಾದ್ ಜೋಶಿ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಹೆಚ್​​.ಡಿ.ಕುಮಾರಸ್ವಾಮಿ, ತೆಲುಗು ದೇಶಂ ಪಕ್ಷದ ಅಧ್ಯಕ್ಷ, ಮಾಜಿ ಸಿಎಂ ಚಂದ್ರಬಾಬು ನಾಯ್ಡು, ಜೆಡಿಯು ನಾಯಕ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್​​, ಮಹಾರಾಷ್ಟ್ರ ಸಿಎಂ ಶಿಂಧೆ, ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್​​​, ಲೋಕ ಜನಶಕ್ತಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಸೇರಿ ಮೈತ್ರಿ ನಾಯಕರು ಭಾಗಿಯಾಗಿದ್ದಾರೆ.

ಚಂದ್ರಬಾಬು ನಾಯ್ಡು ಮಾತು

ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ, ಮೋದಿ ಸರಿಯಾದ ಸಮಯಕ್ಕೆ ಸೂಕ್ತ ನಾಯಕರಾಗಿ ಆಯ್ಕೆಯಾಗಿದ್ದಾರೆ. ಮೋದಿ ನೇತೃತ್ವದಲ್ಲಿ 3ನೇ ಬಾರಿ ಸರ್ಕಾರ ರಚಿಸುತ್ತಿರುವುದು ಐತಿಹಾಸಿಕ ದಿನ ಎಂದು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಹೆಚ್​ಡಿ ಕುಮಾರಸ್ವಾಮಿ ಏನಂದ್ರು? ಮೋದಿ, ಅಮಿತ್ ಶಾ ಸೇರಿ ಮೈತ್ರಿ ನಾಯಕರಿಗೆ ನನ್ನ ಧನ್ಯವಾದ, 10 ವರ್ಷ ದೇಶದ ಪ್ರಗತಿಗಾಗಿ ಕೆಲಸ ಮಾಡಿದ ಮೋದಿಗೆ ಅಭಿನಂದನೆಗಳು, ಮುಂದಿನ ಅವಧಿಗೂ ಮೋದಿ ಸೇವೆ ಮುಂದುವರಿಯಲಿದೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಿತೀಶ್​ ಕುಮಾರ್ ಮಾತು ಮೋದಿ ದೇಶದ ಸೇವೆ ಮಾಡಿದ್ದಾರೆ, ಮುಂದಿನ ಅವಧಿಯಲ್ಲಿ ಏನು ಬಾಕಿ ಉಳಿದಿದೆ ಮಾಡಲಿದ್ದಾರೆ. ಅಲ್ಲಿ ಇಲ್ಲಿ ವಿರೋಧ ಪಕ್ಷದವರು ಗೆದ್ದಿದ್ದಾರೆ ಮುಂದಿನ ಬಾರಿ ಎಲ್ಲರೂ ಸೋಲಲಿದ್ದಾರೆ. ಮೋದಿ ಅವರಿಗೆ ಈಗ ಮತ್ತೊಂದು ಅವಕಾಶ ಸಿಕ್ಕಿದೆ ಅವರಿಗೆ ನಮ್ಮ ಬೆಂಬಲವಿದೆ ಎಂದು ನಿತೀಶ್​ ಕುಮಾರ್ ಹೇಳಿದ್ದಾರೆ.

ಮಧ್ಯಾಹ್ನದ ಬಳಿಕ ಎನ್​ಡಿಎ ನಾಯಕರು ರಾಷ್ಟ್ರಪತಿ ಭವನಕ್ಕೆ ತೆರಳಲಿದ್ದಾರೆ, ಬೆಂಬಲ ಪತ್ರದ ಜತೆಗೆ ಮೋದಿಯವರು ಸರ್ಕಾರ ರಚನೆ ಹಕ್ಕು ಮಂಡಿಸಲಿದ್ದಾರೆ.