ಮೆಟ್ಟಿಲು ಏರುತ್ತಿರುವಾಗಲೇ ಬಸ್‌ ಚಲಾಯಿಸಿದ ಚಾಲಕ – ವಿದ್ಯಾರ್ಥಿನಿಗೆ ಗಂಭೀರ ಗಾಯ..ಮುಂದೇನಾಯ್ತು..?

ಭಟ್ಕಳ ಜೂನ್‌ 07 : ವಿದ್ಯಾರ್ಥಿನಿಯೋರ್ವಳು ಬಸ್‌ ಮೆಟ್ಟಿಲು ಹತ್ತುತ್ತಿರುವಾಗಲೇ ಚಾಲಕ್‌ ಬಸ್‌ ಚಲಾಯಿಸಿದ್ದರಿಂದ, ವಿದ್ಯಾರ್ಥಿನಿ ಬಸ್‌ನಿಂದ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ನಡೆದಿದೆ..

ಮೂಢ ಶಿರಾಲಿಯ ಚಿತ್ರಾ ಮಂಜುನಾಥ ನಾಯ್ಕ ಬಸ್‌ನಿಂದ ಕೆಳಕ್ಕೆ ಬಿದ್ದು ಗಾಯಗೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ಬೈಂದೂರು ಪಿ.ಯು ಕಾಲೇಜಿನಲ್ಲಿ ಪ್ರಥಮ ವರ್ಷದ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆ, ಎಂದಿನಂತೆ ಶಿರಾಲಿಗೆ ಬಂದು ಬಸ್‌ಗಾಗಿ ಕಾಯುತ್ತಿದ್ಳು. ಈ ವೇಳೆ ಬೆಳಗ್ಗೆ 7.15ರ ಸುಮಾರಿಗೆ ಕುಮಟಾ ಕಡೆಯಿಂದ ಭಟ್ಕಳ ಕಡೆಗೆ ತೆರಳುವ ಜನ ಸ್ನೇಹಿ ಬಸ್‌ ಬಂದಿದೆ. ಭಟ್ಕಳದ ಕಡೆಗೆ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳೊಂದಿಗೆ ಚಿತ್ರಾ ಕೂಡ ಬಸ್‌ ಹತ್ತಲು ಮುಂದಾಗಿದ್ದಾಳೆ. ಆದ್ರೆ ಚಿತ್ರಾ ಮೆಟ್ಟಿಲು ಹತ್ತುತ್ತಿರುವಾಗಲೇ ಚಾಲಕ ಬಸ್‌ ಚಲಾಯಿಸಿದ್ದಾನೆ. ಚಾಲಕನ ಬೇಜವಾಬ್ದಾರಿತನದಿಂದ ಕೆಳಗೆ ಬಿದ್ದ ಚಿತ್ರಾ ಗಂಭೀರವಾಗಿ ಗಾಯಗೊಂಡಿದ್ದಾಳೆ…

ಅದೃಷ್ಟವಶಾತ ಚಿತ್ರಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಬಸ್‌ನಿಂದ ಬಿದ್ದ ವಿದ್ಯಾರ್ಥಿನಿಯ ಎರಡು ಮೊಣಕಾಲು ಹಾಗೂ ಮುಖದ ಗಲ್ಲಕ್ಕೆ ಗಾಯವಾಗಿದ್ದು ತಕ್ಷಣ ಆಕೆಯನ್ನು ಶಿರಾಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ನಂತರ ವಿದ್ಯಾರ್ಥಿನಿಯ ಪಾಲಕರು ಹಾಗೂ ಸಂಬಂಧಿಕರು ಭಟ್ಕಳ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಸ್ಥಳಕ್ಕೆ ಡಿಪ್ಪೋ ಮ್ಯಾನೇಜರ್ ಬರುವಂತೆ ಒತ್ತಾಯ ಮಾಡಿದ್ರು. ವಿಷಯ ತಿಳಿದು ಸ್ಥಳಕ್ಕೆ ಬಂದ ಡಿಪೋ ಮ್ಯಾನೇಜರ್ ದಿವಾಕರ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಅಷ್ಟಕ್ಕೆ ಸುಮ್ಮನಾಗದ ವಿದ್ಯಾರ್ಥಿನಿಯ ಪಾಲಕರು ಸ್ಥಳಕ್ಕೆ, ಬಸ್ ಚಾಲಕ ಹಾಗೂ ನಿರ್ವಾಹಕರನ್ನು ಕರೆಸುವಂತೆ ಒತ್ತಾಯ ಮಾಡಿದ್ರು. ಅಷ್ಟರಲ್ಲೇ ಬಸ್ ಪುನಃ ಕುಮಟಾಗೆ ಹೋದ ಹಿನ್ನೆಲೆಯಲ್ಲಿ ದೂರವಾಣಿ ಮೂಲಕ ಡಿಪೋ ಮ್ಯಾನೇಜರ್‌, ಚಾಲಕ ಹಾಗೂ ನಿರ್ವಾಹಕನನ್ನು ಸಂಪರ್ಕಿಸಿದಾಗ ಈ ಘಟನೆ ಬಗ್ಗೆ ನಮಗೆ ತಿಳಿದೆ ಇಲ್ಲ ಎಂದು ಉತ್ತಸಿದ್ದಾರೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಪಾಲಕರು ಮತ್ತು ಸಂಬಂಧಿಕರು ಕೂಡಲೇ ಇಬ್ಬರನ್ನು ಇಲ್ಲಿಗೆ ಕರೆಸುವಂತೆ ಪಟ್ಟು ಹಿಡಿದ್ರು. ನಂತರ ಸ್ಥಳಕ್ಕೆ ಬಂದ ನಗರ ಠಾಣೆ ಪೊಲೀಸರು ಪಾಲಕರನ್ನು ಸಮಾಧಾನ ಪಡಿಸಿದ್ರು.

ಈ ವೇಳೆ ನುಡಿಸಿರಿ ವಾಹಿನಿಯೊಂದಿಗೆ ಮಾತನಾಡಿದ ವಿದ್ಯಾರ್ಥಿನಿಯ ತಾಯಿ ಮಂಗಳ ನನ್ನ ಮಗಳು ಬೆಳ್ಳಿಗ್ಗೆ ಬೈಂದೂರು ಕಾಲೇಜಿಗೆ ತೆರಳಲು ತನ್ನಿಬ್ಬರು ಸ್ನೇಹಿತರೊಂದಿಗೆ ಶಿರಾಲಿಯಿಂದ ಭಟ್ಕಳಕ್ಕೆ ಬರುವ ಬಸ್ ಹತ್ತುತ್ತಿದ್ದಾಗಲೇ ಚಾಲಕ ಬಸ್‌ ಚಲಾಯಿಸಿದ್ದಾನೆ. ಹೀಗಾಗಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾಳೆ. ಇದನ್ನು ನೋಡಿದ ಆಕೆಯ ಇಬ್ಬರು ಸ್ನೇಹಿತರು ಕೂಡ ಬಸ್‌ನಿಂದ ಕೆಳಗೆ ಇಳಿದು ಬಂದಿದ್ದಾರೆ. ಈ ರೀತಿಯ ಬೇಜವಾಬ್ದಾರಿಗೆ ಬಸ್ ಚಾಲಕ ಹಾಗೂ ನಿರ್ವಾಹಕ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು…

ಬಳಿಕ ಡಿಪೋ ಮ್ಯಾನೇಜರ್ ದಿವಾಕರ ಮಾತನಾಡಿ ಕಾಲೇಜಿಗೆ ತೆರಳುವ ವಿದ್ಯಾರ್ಥಿ ಬಸ್ ಹತ್ತುವ ವೇಳೆ ಬಸ್‌ನಿಂದ ಬಿದ್ದು ಗಾಯಗೊಂಡಿದ್ದಾರೆ ಎಂದು ಭಟ್ಕಳ ಬಸ್ ನಿಲ್ದಾಣಕ್ಕೆ ಬಂದು ಆಕೆಯ ಪಾಲಕರು ದೂರು ನೀಡಿದ್ದಾರೆ. ಬಳಿಕ ಚಾಲಕರಿಗೆ ದೂರವಾಣಿ ಮೂಲಕ ಕರೆ ಮಾಡಿದಾಗ ಈ ಘಟನೆ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಸದ್ಯ ಅವರು ಕುಮಾಟಾಗೆ ತೆರಳಿದ್ದು ಪುನಃ ಭಟ್ಕಳಕ್ಕೆ ಬಂದ ನಂತರ ಪರಿಶೀಲನೆ ಮಾಡಿ ವಿದ್ಯಾರ್ಥಿನಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ. ಅದೇ ರೀತಿ ಚಾಲಕರ ತಪ್ಪು ಕಂಡು ಬಂದರೆ ಅವರ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ರು…