ಕದ್ರಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುವ ಸೂಚನೆ

ಕಾರವಾರ: ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ತಾಲೂಕಿನ ಕದ್ರಾ ಜಲಾಶಯದ ಒಳ ಹರಿವಿನ ಮಟ್ಟ ಏರುತ್ತಿದೆ. ಜಿಲ್ಲಾಡಳಿತ ನಿಗದಿಪಡಿಸಿದ ಗರಿಷ್ಟ ಮಟ್ಟವನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತದೆ ಎಂದು ಕೆಪಿಸಿಎಲ್ ತಿಳಿಸಿದೆ. ಈ ಕುರಿತು ಜಲಾಶಯದ ಕೆಳ ಭಾಗದ ಗ್ರಾಮಸ್ಥರು ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.

ಕಾಳಿ ನದಿಯೋಜನೆ 2 ನೇ ಹಂತದ ಕದ್ರಾ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಮಳೆಗಾಲದ ಅವಧಿಯಲ್ಲಿ ಜಿಲ್ಲಾಡಳಿತ ಉತ್ತರಕನ್ನಡ ನಿಗದಿಪಡಿಸಿರುವ ಕದ್ರಾ ಜಲಾಶಯದ ಗರಿಷ್ಠ ಮಟ್ಟ 31.00 ಮೀಟರಗಳಾಗಿದ್ದು ಬುಧವಾರ ಜಲಾಶಯದ ಮಟ್ಟ 30.65 ಮೀಟರ್ ಆಗಿದ್ದು ಹಾಗೂ ಒಳಹರಿವಿನ ಪ್ರಮಾಣ 22,616 ಕ್ಯುಸೆಕ್ಸ್ ಆಗಿದೆ.

ಅಲ್ಲದೇ ಆ. 8 ರಂದು ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣೆ ಕೇಂದ್ರದಿಂದ ಮಳೆ ಅಲರ್ಟ್ ಘೋಷಣೆಯಾಗಿದ್ದು, ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಇದೇ ರೀತಿಯಲ್ಲಿ ಜಲಾಶಯದ ಒಳಹರಿವು ಮುಂದುವರೆದರೆ ಕಡಿಮೆ ಜಲಸಂಗ್ರಹಣಾ ಸಾಮರ್ಥ್ಯವುಳ್ಳ ಕದ್ರಾ ಜಲಾಶಯವು 31.00 ಮೀಟರ ಮಟ್ಟವನ್ನು ಶೀಘ್ರವೇ ತಲುಪುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುವುದು ಎಂದು ಕೆಪಿಸಿಎಲ್ ತಿಳಿಸಿದೆ.

ಆಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ದಂಡೆಯ ಪಾತ್ರದಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರುಗಳೊಂದಿಗೆ ಜಿಲ್ಲಾಡಳಿತ ನಿಗದಿಪಡಿಸಿರುವ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಜೊತೆಗೆ ಕದ್ರಾ ಅಣೆಕಟ್ಟೆಯ ಕೆಳಭಾಗದಲ್ಲಿ ದೋಣಿ ಸಂಚಾರ, ಮೀನುಗಾರಿಕೆ ಮತ್ತು ಇತರೆ ಚಟುವಟಿಕೆಗಳನ್ನು ಮಳೆಗಾಲದ ಅವಧಿಯಲ್ಲಿ ನಡೆಸದಂತೆ ಸೂಚಿಸಲಾಗಿದೆ.