ಇಪಿಎಫ್ ಖಾತೆ ರಚಿಸುವಾಗ ಆಧಾರ್ ಮತ್ತು ಯುಎಎನ್ ಮಾಹಿತಿ ಒಂದಕ್ಕೊಂದು ತಾಳೆಯಾಗಬೇಕು. ಇಲ್ಲದಿದ್ದರೆ ಹಣ ಹಿಂಪಡೆಯುವಾಗ ಕಷ್ಟವಾಗುತ್ತದೆ. ಬಹಳಷ್ಟು ಇಪಿಎಫ್ನ ಸದಸ್ಯರ ಯುಎಎನ್ ಮತ್ತು ಆಧಾರ್ ವಿವರದಲ್ಲಿ ಹೊಂದಿಕೆ ಆಗಿರುವುದಿಲ್ಲ. ಒಂದೋ ಆಧಾರ್ನಲ್ಲಿರುವ ಮಾಹಿತಿಯನ್ನು ಬದಲಿಸಬೇಕು. ಅಥವಾ ಯುಎಎನ್ ಮಾಹಿತಿ ಬದಲಿಸಬೇಕು. ಆದರೆ, ಆಧಾರ್ ಮತ್ತು ಯುಎಎನ್ ಹೊಂದಿಕೆಯಾಗದೇ ಇರುವ ಇಪಿಎಫ್ ಖಾತೆದಾರ ಆಕಸ್ಮಿಕವಾಗಿ ಮೃತಪಟ್ಟಾಗ ನಾಮಿನಿ ಹಣ ಕ್ಲೇಮ್ ಮಾಡುವಾಗ ತೊಂದರೆ ಆಗುತ್ತದೆ. ಸಾವನ್ನಪ್ಪಿದ ವ್ಯಕ್ತಿಯ ಆಧಾರ್ ದಾಖಲೆಯನ್ನು ತಿದ್ದಲು ಅಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಇಪಿಎಫ್ಒ ಸಂಸ್ಥೆ ಹೊಸ ನಿಯಮವೊಂದನ್ನು ತಂದಿದ್ದು, ಇಂಥ ಪ್ರಸಂಗಗಳಲ್ಲಿ ಇಪಿಎಫ್ ಡೆತ್ ಕ್ಲೇಮ್ ಪ್ರಕ್ರಿಯೆಯನ್ನು ಸರಳಗೊಳಿಸಿದೆ.
ಇಪಿಎಫ್ ಸದಸ್ಯ ಸತ್ತ ಬಳಿಕ, ಅವರ ಆಧಾರ್ ವಿವರ ತಾಳೆಯಾಗದೇ ಇದ್ದರೂ ನಾಮಿನಿಯು ಪಿಎಫ್ ಹಣ ಕ್ಲೇಮ್ ಮಾಡಲು ಈಗ ಅವಕಾಶ ಇದೆ. ಇಲ್ಲಿ ಯುಎಎನ್ನಲ್ಲಿರುವ ವಿವರ ಸರಿ ಇದ್ದು, ಆಧಾರ್ನಲ್ಲಿ ಮಾತ್ರವೇ ವ್ಯತ್ಯಾಸ ಇದ್ದಂತಹ ಪ್ರಕರಣಗಳಿಗೆ ಮಾತ್ರ ಈ ಹೊಸ ನಿಯಮವು ಸಹಾಯಕ್ಕೆ ಬರುತ್ತದೆ.
ಯುಎಎನ್ ಮಾಹಿತಿ ತಪ್ಪಾಗಿದ್ದರೆ?
‘ಒಂದು ವೇಳೆ ಆಧಾರ್ ಡಾಟಾ ಸರಿಯಾಗಿದ್ದು ಯುಎಎನ್ನಲ್ಲಿ ತಪ್ಪಾಗಿದ್ದರೆ, 2024ರ ಮಾರ್ಚ್ 26ರಂದು ಹೊರಡಿಸಲಾದ ಮಾರ್ಗಸೂಚಿಯ ಪ್ಯಾರಾ 6.9 ಮತ್ತು 6.10ರಲ್ಲಿನ ನಿಯಮಗಳನ್ನು ಅನುಸರಿಸಬೆಕು. ಆಧಾರ್ ಮೂಲಕ ಯುಎಎನ್ನಲ್ಲಿರುವ ದತ್ತಾಂಶವನ್ನು ಬದಲಾಯಿಸಬೇಕಾಗುತ್ತದೆ,’ ಎಂದು ಇಪಿಎಫ್ಒ ಸಂಸ್ಥೆ ಇತ್ತೀಚೆಗೆ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.
ಸತ್ತ ಪಿಎಫ್ ಸದಸ್ಯರ ಆಧಾರ್ ಖಾತೆಗಳು ಡೀ ಆ್ಯಕ್ಟಿವೇಟ್ ಆಗಿರುವುದು, ತಾಂತ್ರಿಕ ಸಮಸ್ಯೆಗಳು ಎದುರಾಗುವುದು ಇತ್ಯಾದಿ ಕಾರಣಗಳಿಂದ ಆಧಾರ್ ಅಥೆಂಟಿಕೇಶನ್ ಪಡೆಯಲು ಸಾಧ್ಯವಾಗದೇ ಹೋಗಬಹುದು. ಇಂಥ ಸನ್ನಿವೇಶದಲ್ಲಿ ಇಪಿಎಫ್ಒ ಈ ಕೆಳಗಿನ ಕ್ರಮಗಳನ್ನು ಅನುಸರಿಸಲು ತಿಳಿಸಿದೆ.
- ಸಾವಿನ ಪ್ರಕರಣಗಳಲ್ಲಿ ಆಧಾರ್ ಸೀಡಿಂಗ್ ಇಲ್ಲದೇ ಕ್ಲೈಮ್ ಪಡೆಯಲು ತಾತ್ಕಾಲಿಕವಾಗಿ ಅನುಮತಿಸಬಹುದು.
- ಇ-ಆಫೀಸ್ ಫೈಲ್ ಮೂಲಕ ಆಫೀಸರ್ ಇನ್ಚಾರ್ಜ್ ಅವರಿಂದ ಅನುಮೋದನೆ ಪಡೆಯಬೇಕು.
- ಸಾವನ್ನಪ್ಪಿದ ಇಪಿಎಫ್ ಸದಸ್ಯನ ಪಿಎಫ್ ಹಣಕ್ಕೆ ಕ್ಲೇಮ್ ಮಾಡುವ ವ್ಯಕ್ತಿಯ ವಿವರಗಳನ್ನು ಸೂಕ್ತವಾಗಿ ಪರಿಶೀಲಿಸಬೇಕು