ಬೆಂಗಳೂರು, ಮೇ 08 : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್ ಪ್ರಕರಣದಲ್ಲಿ ಹಾಗೂ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪ ಹೊತ್ತಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ಬುಧವಾರ ನಡೆದಿದ್ದು, ಏಳು ದಿನ ಅಂದರೆ ಮೇ 14ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಲಾಗಿದೆ. ಹೀಗಾಗಿ ಪರಪ್ಪನ ಅಗ್ರಹಾರಕ್ಕೆ ರೇವಣ್ಣ ಶಿಫ್ಟ್ ಆಗಲಿದ್ದಾರೆ. ಅಮಾವಾಸ್ಯೆ ದಿನವೇ ರೇವಣ್ಣ ಅವರಿಗೆ ಜೈಲುವಾಸ ಆದಂತೆ ಆಗಿದೆ.
ವಾದ – ಪ್ರತಿವಾದ ಆಲಿಸಿದ 17ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು, ರೇವಣ್ಣ ಅವರನ್ನುದ್ದೇಶಿಸಿ ನಿಮಗೆ ಪೊಲೀಸರಿಂದ ತೊಂದರೆ ಆಗಿದೆಯಾ? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ರೇವಣ್ಣ, ಕಸ್ಟಡಿಗೆ ಬಂದು 3 ದಿನ ಆಗಿದೆ. ಮಾತ್ರೆ ತೆಗೆದುಕೊಳ್ಳಲು ತಡ ಆಗುತ್ತಿದೆ. ನನ್ನನ್ನು ಸುಮ್ಮನೆ ಸತಾಯಿಸುತ್ತಿದ್ದಾರೆ. ಪ್ರಕರಣ ದಾಖಲಾಗಿದ್ದು ನನಗೆ ಗೊತ್ತಿಲ್ಲ. ನನಗೆ ಕೇಳಿದ್ದನ್ನು ಹೇಳಿದ್ದೇನೆ. ಎಲ್ಲವೂ ದಾಖಲಿಸಿಕೊಂಡಿದ್ದಾರೆ. ಮೂರು ದಿನದಿಂದ ಹೊಟ್ಟೆ ನೋವು ಇದೆ. ಮಲಗಲು ಕೂಡ ಆಗಿಲ್ಲ. ಎಲ್ಲ ವಿಚಾರಣೆಯೂ ಮುಗಿದಿದೆ ಎಂದು ತನಿಖಾಧಿಕಾರಿಯು ನಿನ್ನೆಯೇ ಹೇಳಿದ್ದರು. ಆದರೆ, ಇಂದು ಮತ್ತೆ ವಿಚಾರಣೆ ಮಾಡಬೇಕಿದೆ ಎಂದು ಹೇಳುತ್ತಿದ್ದಾರೆ. ನನಗೆ ಹೊಟ್ಟೆ ನೋವಿದೆ. ಮೂರು ದಿನಗಳಿಂದ ಸತತವಾಗಿ ನಿದ್ದೆ ಮಾಡಿಲ್ಲ ಸರ್. ನಾನು ತಪ್ಪೇ ಮಾಡಿಲ್ಲ ಅಂದಾಗ ಯಾಕೆ ಒಪ್ಪಿಕೊಳ್ಳಬೇಕು? ದುರುದ್ದೇಶದಿಂದ ಎಲ್ಲವನ್ನೂ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಾತು ಮುಂದುವರಿಸಿದ ಎಚ್.ಡಿ. ರೇವಣ್ಣ, ಪ್ರಜ್ವಲ್ ತಪ್ಪು ಮಾಡಿರಬಹುದು. ಅದರ ಬಗ್ಗೆ ನನಗೇನು ಗೊತ್ತಿಲ್ಲ. ಬೇಕು ಎಂದೇ ನನ್ನ ಮೇಲೆ ಈ ರೀತಿ ಮಾಡುತ್ತಿದ್ದಾರೆ. ನನಗೆ ಹುಷಾರಿಲ್ಲ, ಬೆಳಗ್ಗೆ ಡ್ರಿಪ್ಸ್ ಹಾಕಿದ್ದಾರೆ. ಹುಷಾರಿಲ್ಲ ಹೊಟ್ಟೆ ಉರಿ ಬಂದಿದೆ. ಗ್ಲುಕೋಸ್ ಹಾಕಿದ್ದಾರೆ. ನಾನು ಶಾಸಕನಾಗಿ 25 ವರ್ಷ ಕಳೆದಿದೆ. ಬೇಕಂತಲೇ ಈ ರೀತಿ ಮಾಡಲಾಗಿದೆ. ವಾರಂಟ್ ಇಲ್ಲದೆಯೆ ಮನೆಗೆ ಬಂದು ಅರೆಸ್ಟ್ ಮಾಡಿದರು ಎಂದೆಲ್ಲ ಮಾಹಿತಿ ನೀಡಿದರು.
ವಾದ – ಪ್ರತಿವಾದ ಆಲಿಸಿದ ನ್ಯಾಯಾದೀಶರು, ಮೇ 14ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಹೀಗಾಗಿ ಇಂದಿನಿಂದ 7 ದಿನಗಳ ವರೆಗೆ ರೇವಣ್ಣ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆಗಲಿದ್ದಾರೆ.