ಪ್ರಜ್ವಲ್‌ ರೇವಣ್ಣ ಎಸ್ಕೇಪ್‌ ಆಗಿದ್ದಾನೆ, ಇದು ದೇಶ ತಲೆತಗ್ಗಿಸುವಂತಹ ವಿಚಾರ : ಡಿಕೆ ಶಿವಕುಮಾರ್‌

ಬೆಂಗಳೂರು ಏಪ್ರಿಲ್, 28 : ಪ್ರಜ್ವಲ್ ರೇವಣ್ಣ ಎಸ್ಕೇಪ್‌ ಆಗಿದ್ದಾನೆ, ಇದು ದೇಶ ತಲೆತಗ್ಗಿಸುವಂತಹ ವಿಚಾರ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಪೆನ್‌ಡ್ರೈವ್‌ ವಿಚಾರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ದಳಪತಿಗಳ ಬೆನ್ನು ಹತ್ತಿದ್ದಾರೆ.

ಪೆನ್‌ಡ್ರೈವ್‌ನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿರುವುದು ಸ್ಪಷ್ಟವಾಗಿದೆ ಎಂದು ಮಹಿಳಾ ಆಯೋಗ ಹೇಳಿದೆ. ಅಲ್ಲದೆ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋಗಳನ್ನು ಪರಿಶೀಲನೆ ಮಾಡಬೇಕು ಎಂಬ ಒತ್ತಾಯ ಹೇರಲಾಗಿದೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ‘ಮಹಿಳಾ ಆಯೋಗದವರು ದೂರು ದಾಖಲಿಸಿದ್ದಾರೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ. ಇದು ಅಕ್ಷಮ್ಯ ಅಪರಾಧ. ಸರ್ಕಾರ ನೋಡಿಕೊಳ್ಳುತ್ತದೆ’ ಎಂದು ಹೇಳಿದರು. ‘ಮಾದ್ಯಮದಲ್ಲಿ ನೋಡಿದೆ. ಅವರು ಎಸ್ಕೇಪ್ ಆಗಿದ್ದಾರೆ ಅಂತ. ಸಂತ್ರಸ್ತರು ದೂರು ಕೊಟ್ಟಿದ್ದಾರೆ. ಮುಂದಿನ ಕ್ರಮ ಕೈಗೊಳ್ಳಳಾಗುತ್ತದೆ’ ಎಂದು ಹೇಳಿದರು.

ಶನಿವಾರ ಮುಂಜಾನೆ ಮೂರು ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿದ್ದಾರೆ. LH 755 ಲುಫ್ತಾನ್ಸಾ (Lufthansa airlines) ಏರ್‌ಲೈನ್ಸ್ ಮೂಲಕ ಕೆಐಎಎಲ್‌ನಿಂದ ಜರ್ಮನಿಯ ಫ್ರಾಂಕ್ ಫರ್ಟ್‌ಗೆ ಪ್ರಜ್ವಲ್ ರೇವಣ್ಣ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶ ಮಾಡುವ ಮುಂಚೆಯೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದಾರೆ.