BJP Manifesto: BJP Manifesto: ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಗುರಿಯಲ್ಲಿರುವ ಬಿಜೆಪಿಯು ಪ್ರಣಾಳಿಕೆ ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆಯೇ ಬಿಜೆಪಿಯು ಹಲವು ಪ್ರಮುಖ ಘೋಷಣೆಗಳನ್ನು ಮಾಡಿದೆ. ನರೇಂದ್ರ ಮೋದಿ ಅವರು ಬಿಜೆಪಿ ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡಿದ್ದು, ಪ್ರಣಾಳಿಕೆಯಲ್ಲಿ ಏನೆಲ್ಲ ಘೋಷಣೆ ಮಾಡಲಾಗಿದೆ? ಯಾವುದಕ್ಕೆ ಆದ್ಯತೆ ನೀಡಲಾಗಿದೆ? ಅಚ್ಚರಿಯ ಘೋಷಣೆಗಳು ಯಾವವು ಎಂಬುದರ ಕುರಿತ ಮಾಹಿತಿ ಇಲ್ಲಿದೆ.
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಜನರ ವಿಶ್ವಾಸ ಗಳಿಸುವ ದಿಸೆಯಲ್ಲಿ ಬಿಜೆಪಿಯು ಪ್ರಣಾಳಿಕೆ (BJP Manifesto) ಬಿಡುಗಡೆಗೊಳಿಸಿದೆ. ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ಸಂಕಲ್ಪ ಪತ್ರವನ್ನು (BJP Sankalp Patra) ಬಿಡುಗಡೆ ಮಾಡಲಾಗಿದ್ದು, ರೈತರು, ಬಡವರು, ಮಹಿಳೆಯರಿಗೆ ಮೋದಿ ಭರ್ಜರಿ ಕೊಡುಗೆ ಘೋಷಿಸಿದ್ದಾರೆ. ಮುಂದಿನ 5 ವರ್ಷಗಳವರೆಗೆ ಉಚಿತವಾಗಿ ಪಡಿತರ ವಿತರಣೆ, ಜನೌಷಧಿ ಕೇಂದ್ರಗಳಲ್ಲಿ ಶೇ.80ರಷ್ಟು ರಿಯಾಯಿತಿಯೊಂದಿಗೆ ಔಷಧಗಳ ಪೂರೈಕೆ, ಆಯುಷ್ಮಾನ್ ಭಾರತ್ ಯೋಜನೆ ಮುಂದುವರಿಕೆ ಸೇರಿ ಹಲವು ಘೋಷಣೆಗಳಣ್ನು ಮೋದಿ ಮಾಡಿದ್ದಾರೆ.
ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶಗಳು
- 70 ವರ್ಷ ದಾಟಿದವರಿಗಾಗಿ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ, ಎಲ್ಲರಿಗೂ ಉಚಿತ ಚಿಕಿತ್ಸೆ
- ಜನೌಷಧಿ ಕೇಂದ್ರಗಳಲ್ಲಿ ಶೇ.80ರಷ್ಟು ರಿಯಾಯಿತಿಯೊಂದಿಗೆ ಔಷಧ ವಿತರಣೆ
- ಬಡವರಿಗೆ 3 ಕೋಟಿ ಮನೆಗಳ ನಿರ್ಮಾಣ
- ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಪೂರೈಕೆ
- ಕೋಟ್ಯಂತರ ಕುಟುಂಬಗಳಿಗೆ ಸೋಲಾರ್ ಮೂಲಕ ಉಚಿತವಾಗಿ ವಿದ್ಯುತ್ ಪೂರೈಕೆ
- ಮುದ್ರಾ ಯೋಜನೆ ಅಡಿಯಲ್ಲಿ ಸಿಗುವ ಸಾಲದ ಮೊತ್ತ 20 ಲಕ್ಷ ರೂ.ಗೆ ಏರಿಕೆ
- ಅಮೃತ್ ಭಾರತ್, ವಂದೇ ಭಾರತ್ ರೈಲುಗಳ ಸಂಖ್ಯೆ ಹೆಚ್ಚಳ
- ಮಂಗಳಮುಖಿಯರಿಗೂ ಆಯುಷ್ಮಾನ್ ಭಾರತ್ ಯೋಜನೆ ಅಡಿ ಉಚಿತ ಚಿಕಿತ್ಸೆ
- 10 ಕೋಟಿ ಮಹಿಳೆಯರಿಗೆ ಉದ್ಯೋಗ, ಉದ್ಯಮ ಕುರಿತು ಕೌಶಲ ತರಬೇತಿ
- ಮೂರು ಕೋಟಿ ಮಹಿಳೆಯರಿಗೆ ಲಕ್‌ಪತಿ ದೀದಿ ಯೋಜನೆಯ ಗ್ಯಾರಂಟಿ
- ರೈತರಿಗೆ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಹಣ ವರ್ಗಾವಣೆ ಮುಂದುವರಿಕೆ
- ದೇಶಾದ್ಯಂತ ಡೇರಿ ಸಹಕಾರ ಸಂಘಗಳನ್ನು ಹೆಚ್ಚಿಸಲಾಗುವುದು
- ಕ್ರೀಡೆಯಲ್ಲಿ ಸ್ತ್ರೀಯರ ಪ್ರಾತಿನಿಧ್ಯ ಹೆಚ್ಚಿಸಲು ಹೊಸ ಯೋಜನೆ
- ತಮಿಳು ಭಾಷೆಯ ವೈಶಿಷ್ಟ್ಯ ಸಾರಲು ಆದ್ಯತೆ
- ದೇಶಾದ್ಯಂತ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು
- ಸಂತ ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರಗಳ ನಿರ್ಮಾಣ
- ಹೊಯ್ಸಳರು ಸೇರಿ ಪಾರಂಪರಿಕ ಸ್ಥಳಗಳನ್ನು ವಿಶ್ವದ ಟೂರಿಸಂ ಜತೆ ಜೋಡಣೆ
- ನ್ಯಾನೋ ಯೂರಿಯಾ ಪೂರೈಕೆ, ಉತ್ಪಾದನೆಗೆ ಹೆಚ್ಚಿನ ಒತ್ತು
- ವಿಶೇಷ ಮೀನು ಸಾಕಣೆ, ಮುತ್ತು ಕೃಷಿಗೆ ವಿಶೇಷ ಆದ್ಯತೆ
- ಗ್ರೀನ್ ಎನರ್ಜಿಯಲ್ಲಿ ಆತ್ಮ ನಿರ್ಬರ ಸಾಧನೆ ಮಾಡಲು ತೀರ್ಮಾನ
ಬಿಜೆಪಿ ಪ್ರಣಾಳಿಕೆ ಕುರಿತು ನರೇಂದ್ರ ಮೋದಿ ಮಾತನಾಡಿದರು. “ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯಂದೇ ಪ್ರಣಾಳಿಕೆ ಬಿಡುಗಡೆ ಮಾಡಿರುವುದು ಸಂತಸ ತಂದಿದೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಸರ್ವರ ಏಳಿಗೆಗೆ ಶ್ರಮಿಸಿದೆ. ಬಡವರು, ಯುವಕರು, ಮಹಿಳೆಯರು ಸೇರಿ ಎಲ್ಲರ ಹಿತದೃಷ್ಟಿಯಿಂದ ಕೆಲಸ ಮಾಡಿದ್ದೇವೆ. ಹಾಗಾಗಿ, ಕಳೆದ ಬಾರಿಯಂತೆ ಈ ಬಾರಿಯೂ ಬಿಜೆಪಿಯ ಪ್ರಣಾಳಿಕೆ ಬಗ್ಗೆ ಜನರಿಗೆ ಹೆಚ್ಚು ಕುತೂಹಲವಿದೆ” ಎಂದು ನರೇಂದ್ರ ಮೋದಿ ತಿಳಿಸಿದರು.
ಬಡವರು, ಯುವಕರು, ರೈತರು, ಮಹಿಳೆಯರು, ವಂಚಿತರು, ಹಿರಿಯ ನಾಗರಿಕರು ಸೇರಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ತತ್ವದಲ್ಲಿ ಪ್ರಣಾಳಿಕೆ ತಯಾರಿಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು. ಸುಮಾರು 14 ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯು ಪ್ರಣಾಳಿಕೆ ಬಿಡುಗಡೆ ಮಾಡಿದೆ ಎಂದು ಹೇಳಿದರು.
ಬಿಜೆಪಿ ಪ್ರಣಾಳಿಕೆ ಬಿಡುಗಡೆ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉಪಸ್ಥಿತರಿದ್ದರು. ಪ್ರಣಾಳಿಕೆ ಬಿಡುಗಡೆಗೂ ಮೊದಲು ನರೇಂದ್ರ ಮೋದಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು.