ಮೋದಿ ಕಾರ್ಯಕ್ರಮವನ್ನು ಅಭೂತ ಪೂರ್ವವಾಗಿಸೋಣ- ರೂಪಾಲಿ ಎಸ್.ನಾಯ್ಕ

ಕಾರವಾರ, ಏಪ್ರಿಲ್‌, 27 : ಪ್ರಧಾನಿ ನರೇಂದ್ರ ಮೋದಿ ಏ.28ರಂದು ಶಿರಸಿಗೆ ಆಗಮಿಸಿ ಬಿಜೆಪಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪರವಾಗಿ ಬೃಹತ್ ಬಹಿರಂಗ ಸಭೆ ನಡೆಸಲಿದ್ದಾರೆ. ಜಗ ಮೆಚ್ಚಿದ, ಜನ ಮೆಚ್ಚಿನ ನಾಯಕ, ದೇವ ಮಾನವ ನರೇಂದ್ರ ಮೋದಿ ಅವರ ಸಭೆಯನ್ನು ಅಭೂತಪೂರ್ವವಾಗಿಸೋಣ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಈ ಹಿಂದೆ ನರೇಂದ್ರ ಮೋದಿ ಅಂಕೋಲಾಕ್ಕೆ ಆಗಮಿಸಿದ್ದರು. 40 ವರ್ಷಗಳ ತರುವಾಯ ದೇಶದ ಪ್ರಧಾನಿಯೊಬ್ಬರು ಅಂಕೋಲಾಕ್ಕೆ ಮೊದಲ ಬಾರಿಗೆ ಬಂದಂತಾಗಿತ್ತು. ಇದೀಗ ಎರಡನೇ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವುದು ತುಂಬ ಸಂತಸ ತಂದಿದೆ. ದೇಶದ ಅಭಿವೃದ್ಧಿ ಸಾಧಿಸಿ, ಸ್ಥಿರ ಸರ್ಕಾರ ನೀಡಿ, ಜಾಗತಿಕ ಮಟ್ಟದಲ್ಲಿ ದೇಶ ಬೆಳೆದು ನಿಲ್ಲಲು ಕಾರಣರಾದ ನರೇಂದ್ರ ಮೋದಿ ಆಗಮಿಸುತ್ತಿರುವುದು ಜಿಲ್ಲೆಗೂ ಹೆಮ್ಮೆಯ ಸಂಗತಿ.

ನರೇಂದ್ರ ಮೋದಿ ಉತ್ತರ ಕನ್ನಡ ಜಿಲ್ಲೆಗೆ ಬಂದರೆ ಇಡಿ ದೇಶವೇ ಉತ್ತರ ಕನ್ನಡದತ್ತ ಹೊರಳುತ್ತದೆ. ಇಲ್ಲಿನ ಸಮಸ್ಯೆಗಳು, ಇಲ್ಲಿ ಆಗಬೇಕಾದ ಅಭಿವೃದ್ಧಿಗಳ ಬಗ್ಗೆ ನರೇಂದ್ರ ಮೋದಿ ಅವರ ಗಮನ ಸೆಳೆಯಲೂ ಸಾಧ್ಯವಾಗಲಿದೆ. ಇದರಿಂದ ಜಿಲ್ಲೆ ಅಭಿವೃದ್ಧಿ ಹೊಂದುವ ಆಶಾಭಾವನೆ ನಮ್ಮೆಲ್ಲರದ್ದಾಗಿದೆ.

ರಾಜ್ಯ ಸರ್ಕಾರದ ನಿಷ್ಕ್ರಿಯತೆಯಿಂದ ಉತ್ತರ ಕನ್ನಡದ ಅಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡಿದೆ. ಈಗ ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿ ಅವರೇ ಆಶಾಕಿರಣವಾಗಿದ್ದಾರೆ. ಮೋದಿ ಅವರೇ ನಮಗೆ ಭರವಸೆಯಾಗಿದ್ದಾರೆ. ಈ ದೇಶವನ್ನು ಸುದೀರ್ಘ ಅವಧಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ದೇಶವನ್ನು ಅಧೋಗತಿಗೆ ತಳ್ಳಿತ್ತು. ಕೇವಲ 10 ವರ್ಷದಲ್ಲಿ ಅಭಿವೃದ್ಧಿಯ ಪರ್ವ ಕೈಗೊಂಡು ಜಗತ್ತೇ ನಿಬ್ಬೆರಗಾಗುವ ಸಾಧನೆ ಮಾಡಿದ ಮೋದಿ ಅವರನ್ನು ಪ್ರಶ್ನಿಸಲು ಕಾಂಗ್ರೆಸ್ಸಿಗರಿಗೆ ಯಾವ ನೈತಿಕತೆ ಇದೆ ?

ದೇಶ, ಜನತೆಯ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದರಾಗಿ ಆಯ್ಕೆಯಾಗಬೇಕಾಗಿದೆ. 500 ವರ್ಷಗಳ ಇತಿಹಾಸದಲ್ಲಿ ಶ್ರೀರಾಮ ಮಂದಿರ ನಿರ್ಮಿಸಿದ ನಮ್ಮೆಲ್ಲರ ಹೆಮ್ಮೆಯ ನಾಯಕ ಮೋದಿ ಅವರನ್ನು ಅಭಿನಂದಿಸೋಣ. ವಿಶ್ವನಾಯಕ ನರೇಂದ್ರ ಮೋದಿ ಅವರನ್ನು ಜಿಲ್ಲೆಗೆ ಅಭೂತಪೂರ್ವವಾಗಿ ಸ್ವಾಗತಿಸೋಣ. ಅವರ ಸಭೆಯಲ್ಲಿ ಯಶಸ್ವಿಗೊಳಿಸೋಣ ಎಂದು ರೂಪಾಲಿ ಎಸ್.ನಾಯ್ಕ ಜನತೆಯಲ್ಲಿ ವಿನಂತಿಸಿದ್ದಾರೆ.