ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ಗೆಲ್ಲಲೇಬೇಕು – ಸಚಿವ ಮಂಕಾಳ ವೈದ್ಯ

ಹೊನ್ನಾವರ, ಏಪ್ರಿಲ್‌ 24 : ಹತ್ತು ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರ ನಡೆಸಿದ ಮೋದಿ ಸರಕಾರ ಕೇವಲ ಸುಳ್ಳು ಹೇಳಿ ಕಾಲಹರಣ ಮಾಡಿದ್ದು ಬಿಟ್ಟರೇ, ದೇಶಕ್ಕೆ ಯಾವುದೇ ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯದ ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಕಿಡಿ ಕಾರಿದ್ದಾರೆ.

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಲೋಕಸಭಾ ಚುನಾವಣೆಯ ಪೂರ್ವ ತಯಾರಿಯ ಕುರಿತಂತೆ ಪಕ್ಷದ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಪ್ರಧಾನಿ ಮೋದಿ ಆಡಳಿತ ಸರ್ವಾಧಿಕಾರಿ ಧೋರಣೆ ಹೊಂದಿದ್ದು, ಸಂವಿಧಾನ ಬದಲಾಯಿಸುವ ಹಿಡನ್ ಅಜೆಂಡಾ ಹೊಂದಿದೆ ಎಂದು ಆರೋಪಿಸಿದರು. ಮೋದಿ ಪುನಃ ಅಧಿಕಾರಕ್ಕೆ ಬಂದರೇ, ಮುಂದಿನ ದಿನದಲ್ಲಿ ದೇಶದಲ್ಲಿ ಯಾವುದೆ ಚುನಾವಣೆ ನಡೆಯುವುದರ ಕುರಿತಂತೆ ಅನುಮಾನ ವ್ಯಕ್ತಪಡಿಸಿ, ದೇಶದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನ ಉಳಿಯಬೇಕಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಇನ್ನಷ್ಟೂ ಬಲಗೊಳ್ಳಬೇಕಾದರೇ ದೇಶದ ಜನತೆ ಮತ್ತು ಪಕ್ಷದ ಕಾರ್ಯಕರ್ತರು ತಮ್ಮೇಲ್ಲಾ ಭಿನ್ನಾಭಿಪ್ರಾಯವನ್ನು ಮರೆತು ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಕರೆ ನೀಡಿದರು.

ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಹಿನಾಥ್ ಗಾಂವಕರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಈಗಾಗಲೇ ನಾನು ಜಿಲ್ಲೆಯಾದ್ಯಂತ ಪ್ರತಿವಿಧಾನ ಸಭಾ ಕ್ಷೇತ್ರದಲ್ಲಿ ಮೂರು ಬಾರಿ ಪ್ರವಾಸ ಕೈಗೊಂಡು ನಾಲ್ಕನೇ ಬಾರಿ ಹೊನ್ನಾವರಕ್ಕೆ ಬರುತ್ತಿದ್ದು, ಜಿಲ್ಲೆಯಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತಾವರಣವಿದೆ ಎಂದರು. ನುಡಿದಂತೆ ನಡೆದ ಸಿದ್ದರಾಮಯ್ಯ ಸರಕಾರದ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಕ್ಷೇತ್ರದ ಪ್ರತಿ ಮನೆಮನೆಯ ಮಾತಾಗಿದ್ದು, ಕಾಂಗ್ರೆಸ್ ಸರಕಾರದ ಯೋಜನೆಯ ಬಗ್ಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ ಎಂದರು. ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಕಾರ್ಯಚಟುವಟಿಕೆಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಶತಃಸಿದ್ದ ಎಂದು ಹೇಳಿದರು.

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್.ತೆಂಗೇರಿ ಮಾತನಾಡಿ, ವಿಶಾಲವಾದ ಕಾಂಗ್ರೆಸ್ ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು, ವ್ಯತ್ಯಾಸಗಳು ಇರುವುದು ಸಹಜ. ಆದರೆ ಅವೆಲ್ಲವನ್ನೂ ಮರೆತು, ಕೇವಲ ಪಕ್ಷದ ಗೆಲುವೊಂದೇ ಗುರಿಯಾಗಿಸಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ನೇತ್ರತ್ವದಲ್ಲಿ ಹಗಲು-ರಾತ್ರಿ ಹೋರಾಡುವುದಾಗಿ ಬರವಸೆ ನೀಡಿದರು.

ರಾಜೀವಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ವಿನೋದ ನಾಯ್ಕ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮಹೇಶ್, ಬಿಸಿಸಿ ಪ್ರಧಾನ ಕಾರ್ಯದರ್ಶಿ ಸುರೇಶ ಮೇಸ್ತ, ಇಂಟೆಕ್ ಪ್ರಧಾನ ಕಾರ್ಯದರ್ಶಿ ಕೇಶವ ಮೇಸ್ತ, ಸೇವಾದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರಿಮನೆ, ಮುಖಂಡರಾದ ನಿತ್ಯಾನಂದ ಪಾಲೇಕರ, ಹನೀಪ್ ಶೇಖ ಇನ್ನು ಮೊದಲಾದವರು ಮಾತನಾಡಿದರು.

ವೇದಿಕೆಯಲ್ಲಿ ಕೆ.ಪಿ.ಸಿ.ಸಿ.ಸದಸ್ಯ ಎಂ.ಎನ್.ಸುಬ್ರಮಣ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ,ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್.ಎಚ್.ನಾಯ್ಕ, ಮಂಕಿ ಬಿಸಿಸಿ ಅಧ್ಯಕ್ಷ ಗೋವಿಂದ ನಾಯ್ಕ,ಕುಮಟಾ ಬಿಸಿಸಿ ಅಧ್ಯಕ್ಷ ಭುವನ್ ಭಾಗ್ವತ್, ಡಿಸಿಸಿ ಕಾರ್ಯದರ್ಶಿ ಬಾಲಚಂದ್ರ ನಾಯ್ಕ,ಬಿಸಿಸಿ ಶಿಕ್ಷಕರ ವಿಭಾಗದ ಅಧ್ಯಕ್ಷ ಡಾ.ಎಸ್.ಡಿ.ಹೆಗಡೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು…