ಲೋಕಸಭೆ ಚುನಾವಣೆ ಮೊದಲ ಹಾಗೂ ಎರಡನೇ ಹಂತದ ಮತದಾನ ಕ್ರಮವಾಗಿ ಏಪ್ರಿಲ್ 19ರಂದು ಮತ್ತು ಏಪ್ರಿಲ್ 26ರಂದು ನಡೆದಿದೆ. 2ನೇ ಹಂತದಲ್ಲಿ ಕರ್ನಾಟಕದ ದಕ್ಷಿಣ ಜಿಲ್ಲೆಗಳ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನವಾಗಿತ್ತು. ಇದೀಗ ಮೇ 7ರಂದು ಯಾವೆಲ್ಲ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ ಎಂಬ ವಿವರ ಇಲ್ಲಿದೆ.
ಕರ್ನಾಟಕದಲ್ಲಿ ಇದು ಎರಡನೇ ಹಂತದ ಮತದಾನವಾಗಿದೆ. ಮೊದಲ ಹಂತದಲ್ಲಿ ರಾಜ್ಯದ 14 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇದೀಗ ಮೂರನೇ ಹಂತದಲ್ಲಿ 11 ರಾಜ್ಯಗಳ 92 ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ಹಂತದಲ್ಲಿ ಒಟ್ಟು 1300 ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದು, ಅವರಲ್ಲಿ ಸುಮಾರು 120 ಮಹಿಳೆಯರಾಗಿದ್ದಾರೆ.
ಹಾಗಾದ್ರೆ ಮೇ 7 ರಂದು ಕರ್ನಾಟಕದ ಯಾವೆಲ್ಲಾ ಜಿಲ್ಲೆಗಳಲ್ಲಿ ಮತದಾನ ನಡೆಯುತ್ತದೆ ಎಂಬುದನ್ನು ನೋಡೋದಾದ್ರೆ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಚಿಕ್ಕೋಡಿ, ದಾವಣಗೆರೆ, ಧಾರವಾಡ, ಹಾವೇರಿ, ಕೊಪ್ಪಳ, ಗುಲ್ಬರ್ಗ, ರಾಯಚೂರು, ಶಿವಮೊಗ್ಗ, ಉತ್ತರ ಕನ್ನಡ ಈ ಎಲ್ಲಾ ಕ್ಷೇತ್ರಗಳಲ್ಲೂ ಮತದಾನ ನಡೆಯಲಿದೆ.
ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 6ರ ವರೆಗೆ ನಡೆಯಲಿದೆ. ಸಂಜೆ 6 ಗಂಟೆಯ ಒಳಗೆ ಮತಗಟ್ಟೆಗೆ ಬಂದವರಿಗೆ 6 ರ ನಂತರವೂ ಅವಕಾಶ ದೊರೆಯಲಿದೆ. ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಶೇಕಡಾ 69.56 ರಷ್ಟು ಮತದಾನವಾಗಿತ್ತು. ಮಂಡ್ಯದಲ್ಲಿ (ಶೇ 81.67), ಕೋಲಾರದಲ್ಲಿ (ಶೇ 78.27) ಮತ್ತು ತುಮಕೂರಿನಲ್ಲಿ (ಶೇ 78.05 ರಷ್ಟು) ಅತಿ ಹೆಚ್ಚು ಮತದಾನವಾಗಿತ್ತು. ಬೆಂಗಳೂರು ಸೆಟ್ರಲ್ನಲ್ಲಿ ಶೇ 54.06, ಬೆಂಗಳೂರು ದಕ್ಷಿಣದಲ್ಲಿ ಶೇ 53.17, ಬೆಂಗಳೂರು ಉತ್ತರದಲ್ಲಿ ಶೇ 54.45 ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಶೇ 68.30ರಷ್ಟು ಮತದಾನವಾಗಿತ್ತು.
ಮೂರನೇ ಹಂತದಲ್ಲಿ ಗುಜರಾತ್ನ 25, ಕರ್ನಾಟಕದ 14, ಮಹಾರಾಷ್ಟ್ರದ 11, ಮಧ್ಯಪ್ರದೇಶದ 8, ಛತ್ತೀಸ್ಗಢದ 7, ಬಿಹಾರದ 5, ಅಸ್ಸಾಂನ 4, ಉತ್ತರ ಪ್ರದೇಶದ 10, ಪಶ್ಚಿಮ ಬಂಗಾಳದ 4, ಗೋವಾದ 2, ದಾದರ್-ನಗರ ಹವೇಲಿಯ 2 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮೂರನೇ ಹಂತದಲ್ಲಿ ಕೇಂದ್ರ ಸಚಿವ ಅಮಿತ್ ಶಾ (ಗಾಂಧಿನಗರ), ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (ಗುಣಾ), ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ (ಪೋರಬಂದರ್), ಕೇಂದ್ರ ಸಚಿವ ಪರ್ಷೋತ್ತಮ್ ರೂಪಾಲಾ (ರಾಜ್ಕೋಟ್) ಸೇರಿದಂತೆ ಹಲವು ಹಿರಿಯ ನಾಯಕರ ಭವಿಷ್ಯ ಮತಯಂತ್ರ ಸೇರಲಿದೆ.
ಜೂನ್ 1ರಂದು ಅಂತಿಮ ಹಂತದ ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಅಂದೇ ಫಲಿತಾಂಶವೂ ಪ್ರಕಟಗೊಳ್ಳಲಿದೆ.