ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆಯಲಿದೆ. ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಈ ಮಧ್ಯೆ, ಬಾರ್ ಮಾಲೀಕರೊಬ್ಬರು ವಿನೂತನ ಹೆಜ್ಜೆ ಇಟ್ಟಿದ್ದಾರೆ. ಮತದಾನ ಮಾಡಿ ಗುರುತು ತೋರಿಸಿದರೆ ಮದ್ಯವನ್ನು ರಿಯಾಯಿತಿ ದರದಲ್ಲಿ ನೀಡುವುದಾಗಿ ಘೋಷಿಸಿದ್ದಾರೆ. ಹಾಗಾದರೆ, ಯಾವ ಬಾರ್ನಲ್ಲಿ ಡಿಸ್ಕೌಂಟ್ಗೆ ಮದ್ಯ ಸಿಗಲಿದೆ? ಯಾವಾಗ ಸಿಗಲಿದೆ ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.
ಪ್ರತಿ ಬಾರಿ ಚುನಾವಣೆ ಬಂದಾಗಲೂ ಮತದಾನ ಪ್ರಮಾಣ ಹೆಚ್ಚಿಸಲು ಸರ್ಕಾರಿ ಸಂಸ್ಥೆಗಳಿಂದ ಹಿಡಿದು ಖಾಸಗಿ ಸಂಸ್ಥೆಗಳು, ಇತರ ಸಮಾಜ ಸೇವಾ ಸಂಸ್ಥೆಗಳು ವಿವಿಧ ರೀತಿಯ ಪ್ರಯತ್ನ ಮಾಡುತ್ತವೆ. ಬೆಂಗಳೂರಿನಲ್ಲಂತೂ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿ ಬಂದು ಗುರುತು ತೋರಿಸಿದವರಿಗೆ ಅನೇಕ ರೆಸ್ಟೋರೆಂಟ್ಗಳು ಉಚಿತ ತಿಂಡಿ ನೀಡಿದ ಉದಾಹರಣೆಗಳೂ ಇವೆ. ಇದೀಗ ಹುಬ್ಬಳ್ಳಿಯಲ್ಲಿ ಬಾರ್ ಮಾಲೀಕರೊಬ್ಬರು ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ವಿನೂತನ ಕ್ರಮ ಕೈಗೊಂಡಿದ್ದಾರೆ. ಮತದಾನ ಮಾಡಿ ಬಂದು ಗುರುತು ತೋರಿಸಿದರೆ ಮದ್ಯದ ದರದಲ್ಲಿ ರಿಯಾಯಿತಿ ನೀಡುವುದಾಗಿ ಘೋಷಿಸಿದ್ದಾರೆ.
ಜನರು ಮಂಗಳವಾರ ನಡೆಯಲಿರುವ ಚುನಾವಣೆಯಲ್ಲಿ ಹಕ್ಕನ್ನು ಚಲಾಯಿಸಬೇಕು. ಮತ ಚಲಾಯಿಸಿ, ಮತದಾನ ಮಾಡಿದ ಗುರುತು ತೋರಿಸಿದರೆ ಮದ್ಯದ ದರದ ಮೇಲೆ ಶೇ 3ರ ಡಿಸ್ಕೌಂಟ್ ನೀಡುವುದಾಗಿ ಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿರುವ ಕರ್ನಾಟಕ ವೈನ್ಸ್ ಅಂಗಡಿ ಮಾಲೀಕ ಘೋಷಿಸಿದ್ದಾರೆ. ಈ ವಿಚಾರವಾಗಿ ಬಾರ್ ಮುಂದೆ ಬ್ಯಾನರ್ ಕೂಡ ಹಾಕಿದ್ದಾರೆ.
ಸಾಮಾನ್ಯವಾಗಿ ಮತದಾನದ ದಿನ ಮದ್ಯದಂಗಡಿಗಳು ಬಂದ್ ಇರುತ್ತವೆ. ಹೀಗಾಗಿ ಮತದಾನದ ದಿನ ಮದ್ಯ ಸಿಗುವುದು ಅನುಮಾನ. ಆದಾಗ್ಯೂ, ಮತದಾನದ ಗುರುತು ತೋರಿಸಿ ಆಮೇಲೆ ಒಂದು ಬಾರಿಗೆ ರಿಯಾಯಿತಿ ದರದಲ್ಲಿ ಮದ್ಯ ಖರೀದಿ ಮಾಡಬಹುದಾಗಿದೆ.
ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೋಟೆಲ್ ‘ವೋಟ್ ಮಾಡಿ, ಊಟ ಮಾಡಿ’ ಅಭಿಯಾನದಡಿ ಏಪ್ರಿಲ್ 26ರಂದು ಮತದಾನ ಮಾಡಿದ ಗುರುತು ತೋರಿಸಿದವರಿಗೆ ಬೆಣ್ಣೆ ದೋಸೆ, ಲಡ್ಡು ಮತ್ತು ಜ್ಯೂಸ್ ನೀಡಿತ್ತು. ಬೆಂಗಳೂರಿನ ಹಲವು ಹೋಟೆಲ್ಗಳು ಇಂಥ ಕ್ರಮ ಕೈಗೊಂಡಿದ್ದವು. ಇದಕ್ಕೆ ಹೈಕೋರ್ಟ್ ಅನುಮತಿಯೂ ಇತ್ತು. ಇದೀಗ ಮದ್ಯ ಮಾರಾಟಗಾರರೂ ಅಂಥ ಕ್ರಮಕ್ಕೆ ಮುಂದಾಗಿದ್ದಾರೆ.