ಗ್ಯಾರಂಟಿ ಜನರ ಬದುಕನ್ನು ಬದಲಾಯಿಸುವುದಿಲ್ಲ, ಇದು ವಂಚನೆ ತಂತ್ರ : ಸಿ.ಟಿ.ರವಿ ಆರೋಪ

ಕಾಂಗ್ರೆಸ್ ಪಕ್ಷ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ವಂಚನೆಯ ತಂತ್ರವಾಗಿದೆ ಎಂದು ಯಲ್ಲಾಪುರದಲ್ಲಿ ಮಾಜಿ ಸಚಿವ, ಬಿಜೆಪಿ ಮುಖಂಡ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ…

‌ಯಲ್ಲಾಪುರ, ಮೇ 05 : ಪಟ್ಟಣದ ಅಡಕೆ ಭವನದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಟಿ ರವಿ,  ಮೋದಿಯವರದ್ದು ವಿಶ್ವಾಸಾರ್ಹ ನಾಯಕತ್ವವಾಗಿದೆ. ಗ್ಯಾರಂಟಿ ಆಸೆಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ರೆ, ನಾಳೆ ನಮ್ಮ ದೇಶ ಮತ್ತು ನಮ್ಮ ಮಕ್ಕಳ ಭವಿಷ್ಯ ಅಪಾಯಕ್ಕೆ ಸಿಲುಕುವಂತಾಗುತ್ತದೆ. ಗ್ಯಾರಂಟಿ ಯೋಜನೆಗೆ ಹಣ ಸುರಿಯುತ್ತಿರುವುದರಿಂದ ರಸ್ತೆಯ ಗುಂಡಿ ಮುಚ್ಚಲೂ ರಾಜ್ಯ ಸರ್ಕಾರದ ಬಳಿ ಹಣ ಇಲ್ಲದಂತಾಗಿದೆ ಎಂದು ಟೀಕಿಸಿದರು.

ಭಾರತ ಮಾತಾ ಕೀ ಜೈ ಎನ್ನುವುದಕ್ಕೂ ಅನುಮತಿ ಪಡೆಯಬೇಕಾದ ಸ್ಥಿತಿ ಕಾಂಗ್ರೆಸ್‌ನಲ್ಲಿದೆ. ಮಹಾತ್ಮಾ ಗಾಂಧಿಜೀ ಕಾಲದ ಕಾಂಗ್ರೆಸ್ ಇದಲ್ಲ. ಕಾಂಗ್ರೆಸ್ ಪಕ್ಷದ ದೇಶ ಭಕ್ತಿ ಪ್ರಶ್ನಾರ್ಥಕವಾಗಿದೆ. ಮತಾಂಧರಿಂದ, ಮತಾಂಧರಿಗಾಗಿ, ಮತಾಂಧರಿಗೋಸ್ಕರವೇ ಕಾಂಗ್ರೆಸ್ ಇದೆ. ಆದರೆ ಬಿಜೆಪಿಯು ನೀತಿ, ನೇತೃತ್ವ, ನಿಯತ್ತು ಈ ಆಧಾರದಲ್ಲಿ ನಾವು ಚುನಾವಣೆ ಎದುರಿಸುತ್ತಿದೆ ಎಂದರು.

ದೇಶ ಮೊದಲು, ದೇಶ ಸಮೃದ್ಧಿಯಾಗಬೇಕು ಎನ್ನುವುದು ನಮ್ಮ ತತ್ವವಾಗಿದೆ. ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್ ರಾಷ್ಟ್ರೀಯ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಿದ್ರು..