ಕಾರವಾರ, ಮೇ 04 : ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ಬಾಂಬ್ ಸ್ಫೋಟ, ಚಾಕು ಇರಿತದಿಂದ ಯುವತಿಯರ ಹತ್ಯೆ ಸೇರಿದಂತೆ ಸಮಾಜಘಾತುಕ ಶಕ್ತಿಗಳ ಅಟ್ಟಹಾಸ ನಡೆಯುತ್ತಿದ್ದು ಇದಕ್ಕೆ ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣವೇ ಕಾರಣ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮುಂಡಗೋಡ ತಾಲ್ಲೂಕಿನ ಸಾಲಗಾಂವ, ಮುಂಡಗೋಡ ಪಟ್ಟಣ, ಗುಂಜಾವತಿ, ಚೌಡಳ್ಳಿ, ಕಾತೂರ ಮತ್ತಿತರ ಕಡೆಗಳಲ್ಲಿ ಪಕ್ಷದ ಮುಖಂಡರೊಂದಿಗೆ ಬಿಜೆಪಿ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪರವಾಗಿ ಬಿರುಸಿನ ಪ್ರಚಾರ ನಡೆಸಿದರು.
ಕೇಂದ್ರದ ಹತ್ತು ವರ್ಷಗಳ ಆಡಳಿತದಲ್ಲಿ ದೇಶವನ್ನು ರಕ್ಷಣೆ ಹಾಗೂ ಅಭಿವೃದ್ಧಿ ಮಾಡಿದ ಕೀರ್ತಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. 370 ಕ್ಕೂ ಹೆಚ್ಚು ಯೋಜನೆಗಳನ್ನು ಜಾರಿಗೆ ತಂದು ಲೋಕಾರ್ಪಣೆಗೊಳಿಸಿದ್ದಾರೆ. ಅಸಂಖ್ಯಾತ ಜನರು ಯೋಜನೆಗಳ ಲಾಭವನ್ನು ಪಡೆದುಕೊಂಡಿದ್ದಾರೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ತರುವಾಯ ಜಮ್ಮು ಕಾಶ್ಮೀರದಲ್ಲಿ ಗಲಭೆಗಳು ನಿಯಂತ್ರಣಕ್ಕೆ ಬಂದಿವೆ. ಉಗ್ರರ ಚಟುವಟಿಕೆ ನಿಂತಿದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನರಿಗೆ ಜೀವ ಭಯ ಹೆಚ್ಚಿದೆ.
ಯಾವ ಸಮಯದಲ್ಲಿ ಏನಾಗುತ್ತದೆ ಎಂಬ ಆತಂಕ ಹೆಚ್ಚಿದೆ. ಬೆಂಗಳೂರಿನಲ್ಲಿ ಬಾಂಬ್ ಸ್ಪೋಟ, ಹುಬ್ಬಳ್ಳಿಯಲ್ಲಿ ಹಾಡುಹಗಲೇ ವಿದ್ಯಾರ್ಥಿನಿಯ ಹತ್ಯೆ ಹೀಗೆ ಅನೇಕ ಘಟನೆಗಳು ನಡೆದಿವೆ. ಇದಕ್ಕೆಲ್ಲ ಕಾಂಗ್ರೆಸ್ ನ ಓಲೈಕೆ ರಾಜಕಾರಣವೇ ಕಾರಣ ಎಂದು ಆರೋಪಿಸಿದರು. ಗ್ಯಾರಂಟಿಯ ಹೆಸರಿನಲ್ಲಿ ಸರ್ಕಾರ ಸುಲಿಗೆ ಮಾಡುತ್ತಿದೆ. ಆಸ್ತಿ ನೋಂದಣಿ, ವಿದ್ಯುತ್ ದರ ಏರಿಕೆಯಾಗಿದೆ. ನಮ್ಮ ಕಾರ್ಯಕರ್ತರು ಯಾರು ಭಯಪಡುವ ಅವಶ್ಯಕತೆ ಇಲ್ಲ. ನಾವೆಲ್ಲ ನಿಮ್ಮೊಂದಿಗೆ ಇದ್ದೇವೆ. ಆಮಿಷಗಳಿಗೆ ಬಲಿಯಾಗದೆ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವಂತೆ ಮನವಿ ಮಾಡಿದರು.
ಹನುಮಾನ ಚಾಲೀಸಾ ಹಾಕಿದವರ ಮೇಲೆ, ಭಗವಾ ಧ್ವಜ ಹಾರಿಸುವವರ ಮೇಲೆ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆಯಲ್ಲಿ ಸರ್ಕಾರ ನಡೆದುಕೊಂಡ ರೀತಿ ಖಂಡನೀಯವಾಗಿದೆ. ರಾಜ್ಯ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ. ಅದಕ್ಕಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ನಮ್ಮ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ನೀಡಿದ ಅನುದಾನದಿಂದಲೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.
ಗ್ಯಾರಂಟಿ ಜಪ ಮಾಡುತ್ತಿರುವ ಕಾಂಗ್ರೆಸ್ ಅಭಿವೃದ್ಧಿಯನ್ನು ಮರೆತಿದೆ. ಇಂತಹ ಕಾಂಗ್ರೆಸ್ ನಮಗೆ ಬೇಕೆ ಎಂದು ಪ್ರಶ್ನಿಸಿದ ಅವರು, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಿ, ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸೋಣ ಎಂದು ಮತದಾರರಲ್ಲಿ ವಿನಂತಿಸಿದರು.
ಈ ವೇಳೆ ಬಿಜೆಪಿ ರಾಜ್ಯ ಮಾದ್ಯಮ ವಕ್ತಾರರಾದ ಹರಿಪ್ರಕಾಶ ಕೋಣೆಮನೆ, ಜಿಲ್ಲಾ ಉಪಾಧ್ಯಕ್ಷರುಗಳಾದ ಎಲ್. ಟಿ.ಪಾಟೀಲ್, ಅಶೋಕ ಛಲವಾದಿ, ಮಂಡಲ ಅಧ್ಯಕ್ಷರಾದ ಮಂಜುನಾಥ್ ಪಾಟೀಲ್, ಮಂಡಲ ಪ್ರಧಾನ ಕಾರ್ಯದರ್ಶಿಭರತ್ ಹದಳಗಿ, ವಿಠ್ಠಲ ಬಾಲಂಬೀಡ, ಪಕ್ಷದ ಪ್ರಮುಖರಾದ ರಮೇಶ್ ರಾಯ್ಕರ್, ಸಿ.ಕೆ.ಅಶೋಕ್, ಮಹಾ ಶಕ್ತಿಕೇಂದ್ರ ಅಧ್ಯಕ್ಷರಾದ ಸಂತೋಷ್, ಶಕ್ತಿಕೇಂದ್ರ ಅಧ್ಯಕ್ಷರಾದ ನಿಂಗಜ್ಜ ಕೋಣನಕೇರಿ, ಜೆಡಿಎಸ್ ತಾಲೂಕಾಧ್ಯಕ್ಷರಾದ ಅಂಥೋಜಿ ಮತ್ತಿತರರು ಪಾಲ್ಗೊಂಡಿದ್ದರು.