ಉಡುಪಿ, ಏಪ್ರಿಲ್ 25 : ʼಗಾನಕೋಗಿಲೆʼ ಎಂದೇ ಅಭಿಮಾನಿಗಳ ಮನದಲ್ಲಿ ನೆಲೆಯೂರಿರುವ, ಯಕ್ಷಗಾನದ (Yakshagana) ಬಡಗುತಿಟ್ಟಿನ ಶ್ರೇಷ್ಠ ಭಾಗವತ (Bhagavatha) ಸುಬ್ರಹ್ಮಣ್ಯ ಧಾರೇಶ್ವರ (Subramanya Dhareshwar) ಇನ್ನಿಲ್ಲ. ಅವರು ತಮ್ಮ 67ನೇ ವಯಸ್ಸಿನಲ್ಲಿ ಬೆಂಗಳೂರಿನ ಮನೆಯಲ್ಲಿ ಏ.25ರಂದು ಬೆಳಗ್ಗೆ ನಿಧನ ಹೊಂದಿದರು.
ಭಾಗವತರ ಅಂತ್ಯಕ್ರಿಯೆ ಇಂದು ಸಂಜೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾಗೂರಿನ ಸ್ವಗೃಹದಲ್ಲಿ ನಡೆಯಲಿದೆ. ಸುಮಾರು 46 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು, ಪತ್ನಿ, ಪುತ್ರ ಹವ್ಯಾಸಿ ಕಲಾವಿದ ಕಾರ್ತಿಕ್ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
1957ರ ಸೆ.5ರಂದು ಜನಿಸಿದ ಅವರನ್ನು ಯಕ್ಷರಂಗದ ತಜ್ಞ ಭಾಗವತರೆಂದೇ ಗುರುತಿಸಲಾಗುತ್ತಿತ್ತು. ಯಕ್ಷಗಾನದ ಹೊಸ ಹಾಗೂ ಹಳೆಯ ಪ್ರಸಂಗಗಳ ಪರಿಣಿತರಾಗಿದ್ದರು. ಕೋಟ ಅಮೃತೇಶ್ವರಿ ಮೇಳ, ಪೆರ್ಡೂರು ಮೇಳಗಳಲ್ಲಿ ಭಾಗವತರಾಗಿ, ಹೊಸರಾಗಗಳನ್ನು ಹೊಸ ತಾಂತ್ರಿಕತೆಯನ್ನು ಯಕ್ಷರಂಗದಲ್ಲಿ ಯಶಸ್ವಿಯಾಗಿ ಬಳಸಿದರು. ಸುಮಾರು 400ಕ್ಕಿಂತಲೂ ಅಧಿಕ ಯಕ್ಷಗಾನದ ಆಡಿಯೋ ಕ್ಯಾಸೆಟ್ ಗಳಲ್ಲಿ ಧಾರೇಶ್ವರರ ಧ್ವನಿ ಇದೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ, ಸನ್ಮಾನಗಳಿಗೆ ಪಾತ್ರರಾಗಿರುವ ಧಾರೇಶ್ವರ ಅವರು ಗುರುಗಳಾದ ನಾರಾಯಣಪ್ಪ ಉಪ್ಪೂರರನ್ನು ಸದಾ ಸ್ಮರಿಸುತ್ತಿದ್ದರು. ಸಾಂಪ್ರದಾಯಿಕ ರಾಗಗಳೊಂದಿಗೆ ಹೊಸ ರಾಗಗಳನ್ನು ತಂದು ಪೌರಾಣಿಕ ಹಾಗೂ ಸಾಮಾಜಿಕ ಪ್ರಸಂಗಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದ ಸುಬ್ರಹ್ಮಣ್ಯ ಧಾರೇಶ್ವರರು, ಕಾಳಿಂಗ ನಾವಡರರ ನಂತರ ಯಕ್ಷಗಾನ ರಂಗದಲ್ಲಿ ತನ್ನ ಇಂಪಾದ ಕಂಠದಿಂದ ಜನಪ್ರಿಯರಾದವರು.
ಮೂಲತಃ ಎಲೆಕ್ಟ್ರಿಕಲ್ ಅಂಗಡಿ ಮಾಡಿಕೊಂಡಿದ್ದ ಸುಬ್ರಹ್ಮಣ್ಯ ಧಾರೇಶ್ವರ ಕೋಟದಲ್ಲಿ ಯಕ್ಷಗಾನ ಕೇಂದ್ರಕ್ಕೆ ಸೇರಿ ಅಲ್ಲಿ ಭಾಗವತಿಕೆಯ ಮಟ್ಟುಗಳನ್ನು ಕಲಿತರು. ಉಪ್ಪೂರರಿಂದ ಭಾಗವತಿಕೆಯ ಎಲ್ಲ ಪಟ್ಟುಗಳನ್ನು ಕಲಿತರು. ಆರಂಭದಲ್ಲಿ ಎಲೆಕ್ಟ್ರಿಶಿಯನ್ ಆಗಿ ಅಮೃತೇಶ್ವರಿ ಮೇಳಕ್ಕೆ ಸೇರಿದರು. ಈ ಸಂದರ್ಭ ಗುರುಗಳಾದ ಉಪ್ಪೂರರ ಒತ್ತಾಸೆಯಿಂದ ಭಾಗವತಿಕೆ ಮಾಡಲು ಆರಂಭಿಸಿದರು. ಪೀಠಿಕೆ ಸ್ತ್ರೀವೇಷದವರೆಗೆ ಪದ್ಯ ಹೇಳಿ, ಎಲೆಕ್ಟ್ರಿಶಿಯನ್ ಆಗಿ, ಹಗಲು ಮೈಕ್ ಜಾಹೀರಾತು ನೀಡುವ ಕೆಲಸವನ್ನು ಮಾಡುತ್ತಿದ್ದ ಧಾರೇಶ್ವರರು, ಬಳಿಕ ಭಾಗವತಿಕೆಯಲ್ಲೇ ತೊಡಗಿಸಿಕೊಂಡು ಜನಪ್ರಿಯರಾದರು. ಪೆರ್ಡೂರು ಮೇಳದಲ್ಲಿ ಸುಮಾರು 26ಕ್ಕೂ ಅಧಿಕ ವರ್ಷಗಳ ತಿರುಗಾಟ ಸಹಿತ ಧಾರೇಶ್ವರ ಚಾರಿಟೇಬಲ್ ಟ್ರಸ್ಟ್ ಮೂಲಕ ಯಕ್ಷಗಾನ ಸೇವೆ ಮಾಡಿದ್ದಾರೆ.
ಸುಮಾರು 300ಕ್ಕೂ ಅಧಿಕ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಪ್ರಸಂಗಗಳನ್ನು ನಿರ್ದೇಶಿಸಿದ ಕೀರ್ತಿ ಧಾರೇಶ್ವರ ಅವರಿಗಿದೆ. ಪುರಂದರದಾಸ, ಕನಕದಾಸ, ಬಸವಣ್ಣ, ಚೆನ್ನಮಲ್ಲಿಕಾರ್ಜುನರ ಕೀರ್ತನೆಗಳನ್ನೂ ಅವರು ಹಾಡಿದ್ದಾರೆ. ಕುವೆಂಪು, ಬೇಂದ್ರೆಯವರ ಹಾಡುಗಳೂ ಯಕ್ಷಗಾನದ ಹಾಡುಗಳಾಗಿದ್ದು ಧಾರೇಶ್ವರರ ಕಂಠದಲ್ಲಿ. ಅಮೃತ ವರ್ಷಿಣಿ, ಸಿಂಧೂರ ಭಾಗ್ಯ, ರಕ್ತ ತಿಲಕ, ಶೂದ್ರ ತಪಸ್ವಿನಿ, ಚಾರು ಚಂದ್ರಿಕೆ, ಗಗನ ಗಾಮಿನಿ, ವಸಂತ ಸೇನೆ ನಿರ್ದೇಶಿಸಿದ ಎಲ್ಲ ಪ್ರಸಂಗಗಳೂ ಸೂಪರ್ ಹಿಟ್ ಆಗಿವೆ.