ಯುವಕನೊಬ್ಬ ಕುಡಿದು ಸ್ಕೂಟಿ ಚಲಾಯಿಸುತ್ತಿದ್ದುದಲ್ಲದೆ, ಬಸ್‌ಗೆ ಮುಂದಕ್ಕೆ ಹೋಗಲು ಜಾಗವನ್ನೂ ಬಿಡುತ್ತಿರಲಿಲ್ಲ. ಅಡ್ಡಾದಿಡ್ಡಿಯಾಗಿ ವಾಹನ ಚಲಾವಣೆ ಮಾಡುತ್ತಿದ್ದನ್ನು ಕಂಡ ಚಾಲಕ ಸಾಕಷ್ಟು ಬಾರಿ ಹಾರ್ನ್ ಮಾಡಿದ್ದಾರೆ. ಆದರೆ, ಆತ ಪಕ್ಕಕ್ಕೂ ಹೋಗದೆ, ಬಸ್‌ಗೆ ದಾರಿಯನ್ನೂ ಬಿಡದೆ ಸತಾಯಿಸುತ್ತಿದ್ದ ಇದರಿಂದ ಕುಪಿತಗೊಂಡ ಚಾಲಕ ಆತನ ವರ್ತನೆ ಸಹಿತ ಚಾಲನೆಯನ್ನು ವಿಡಿಯೊ ಮಾಡಿಕೊಂಡಿದ್ದಾರೆ. ಇದು ಗಲಾಟೆಗೆ ಕಾರಣವಾಗಿದೆ.
ಕಾರವಾರ, ಏಪ್ರಿಲ್ 06 : ಬಸ್‌ಗೆ ಓವರ್‌ಟೇಕ್ ಮಾಡಲು ಜಾಗವನ್ನೂ ಬಿಡದ ಸ್ಕೂಟಿ ಚಾಲಕನೊಬ್ಬ ಬಳಿಕ ತನ್ನ ವಿಡಿಯೊ ಮಾಡಿದ್ದಾರೆಂಬ ಕಾರಣಕ್ಕೆ ಬಸ್ ಅನ್ನು ಅಡ್ಡಗಟ್ಟಿ ಕೆಎಸ್‌ಆರ್‌ಟಿಸಿ ಚಾಲಕ (KSRTC Driver) ಹಾಗೂ ನಿರ್ವಾಹಕನ ಮೇಲೆ ಹಲ್ಲೆ (Assault case) ನಡೆಸಿದ್ದಾನೆ.
ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡದ ಜಾಂಬಾ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಶಿರವಾಡ ಮೂಲದ ಸುಭಾಷ್ ಬಾಡ್ಕರ್ ಹಲ್ಲೆ ಮಾಡಿದ ಯುವಕ ಎಂದು ಗೊತ್ತಾಗಿದೆ.
ಯುವಕನೊಬ್ಬ ಕುಡಿದು ಸ್ಕೂಟಿ ಚಲಾಯಿಸುತ್ತಿದ್ದುದಲ್ಲದೆ, ಬಸ್‌ಗೆ ಮುಂದಕ್ಕೆ ಹೋಗಲು ಜಾಗವನ್ನೂ ಬಿಡುತ್ತಿರಲಿಲ್ಲ. ಅಡ್ಡಾದಿಡ್ಡಿಯಾಗಿ ವಾಹನ ಚಲಾವಣೆ ಮಾಡುತ್ತಿದ್ದನ್ನು ಕಂಡ ಚಾಲಕ ಸಾಕಷ್ಟು ಬಾರಿ ಹಾರ್ನ್ ಮಾಡಿದ್ದಾರೆ. ಆದರೆ, ಆತ ಪಕ್ಕಕ್ಕೂ ಹೋಗದೆ, ಬಸ್‌ಗೆ ದಾರಿಯನ್ನೂ ಬಿಡದೆ ಸತಾಯಿಸುತ್ತಿದ್ದ ಇದರಿಂದ ಕುಪಿತಗೊಂಡ ಚಾಲಕ ಆತನ ವರ್ತನೆ ಸಹಿತ ಚಾಲನೆಯನ್ನು ವಿಡಿಯೊ ಮಾಡಿಕೊಂಡಿದ್ದಾರೆ.
ಕಾರವಾರದಿಂದ ಕಡವಾಡಕ್ಕೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಇದಾಗಿದ್ದು, ಸ್ಕೂಟಿಯಲ್ಲಿ ತೆರಳುತ್ತಾ ಬಸ್ ಓವರ್‌ಟೇಕ್ ಮಾಡಲು ಬಿಡದೆ ಯುವಕನಿಂದ ಉದ್ಧಟತನ ಮೆರೆಯಲಾಗಿದ್ದಕ್ಕೆ ಚಾಲಕ ವಿಡಿಯೊ ಮಾಡಿಕೊಂಡಿದ್ದಾರೆ. ಅಸಹನೆಗೊಂಡು ದಾರಿ ಬಿಡಲು ಗೊತ್ತಾಗುವುದಿಲ್ಲವಾ ಎಂದು ಕೂಗಿದ್ದಾರೆ ಕೂಡ. ಆದರೆ, ಇದನ್ನು ಸಹಿಸದ ಯುವಕ ಸುಭಾಷ್ ಬಾಡ್ಕರ್, ಜಾಂಬಾ ಕ್ರಾಸ್ ಬಳಿ ಬಸ್ ಅಡ್ಡಗಟ್ಟಿ ತನ್ನ ಸ್ಕೂಟಿಯನ್ನು ನಿಲ್ಲಿಸಿದ್ದಾನೆ.
ಸೀದಾ ಹೋಗಿ ಜಗಳಕ್ಕೆ ಇಳಿದಿದ್ದಾನೆ. ಇದನ್ನು ಪ್ರಶ್ನೆ ಮಾಡಿದ ನಿರ್ವಾಹಕನ ಮೇಲೆ ಮೊದಲು ಹಲ್ಲೆ ನಡೆಸಿದ್ದಾನೆ. ಬಳಿಕ ಉದ್ದಟತನದ ಡ್ರೈವಿಂಗ್ ಮಾಡಿದ್ದಕ್ಕೆ ಹಾಗೂ ಹಲ್ಲೆ ಮಾಡುತ್ತಿದ್ದನ್ನು ಪ್ರಶ್ನೆ ಮಾಡಿದ ಚಾಲಕನಿಗೂ ಎರಡು ಬಾರಿಸಿದ್ದಾನೆ. ಈ ವೇಳೆ ಸಾಕಷ್ಟು ಗದ್ದಲ ನಡೆದಿದೆ.
ಮಹ್ಮದ್ ಇಸಾಕ್ ಹಲ್ಲೆಗೊಳಗಾದ ಬಸ್ ಚಾಲಕರಾಗಿದ್ದಾರೆ. ಇವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ವೇಳೆ ಯುವಕ ಸುಭಾಷ್ ಕುಡಿದಿದ್ದ ಎಂದು ಗೊತ್ತಾಗಿದೆ. ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಲ್ಲೆ ವಿಡಿಯೊವನ್ನು ಸಹ ಪ್ರಯಾಣಿಕರು, ಸಾರ್ವಜನಿಕರು ವಿಡಿಯೊ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.